ಹಳ್ಳಿಮನೆ ಪಡಸಾಲೆಯಲ್ಲಿ ಕನ್ನಡ ಕಲರವ
ಶ್ರೀವಿಜಯ ಮಹಾಮಂಟಪ, ಶರಣಬಸವೇಶ್ವರ- ಬಂದೇ ನವಾಜ್ ವೇದಿಕೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.15
ನಗರದ ಕನ್ನಡ ಭವನದ ದರ್ಶನಾಪುರ ರಂಗ ಮಂದಿರದಲ್ಲಿ ಶನಿವಾರ ವಿಧ್ಯುಕ್ತವಾಗಿ ಆರಂಭವಾದ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕವಿರಾಜಮಾರ್ಗ ಕತೃ ಶ್ರೀವಿಜಯನ ಸ್ಮರಣಾರ್ಥ ನಿರ್ಮಾಣವಾದ ಮಹಾಮಂಟಪ ಸಾಹಿತ್ಯಾಸಕ್ತರ ಕಣ್ಮನ ಸೆಳೆಯಿತು.
ಆಲ್ದಾಳರಿಗೆ ಸತ್ಕರಿಸಲು ಇಸ್ಲಾಂ ಖುಷಿ: ಸಮ್ಮೇಳನದ ಅಧ್ಯಕ್ಷ ಎಲ್ಬಿಕೆ ಆಲ್ದಾಳ್ರನ್ನು ಕುದುರೆಗಳಿರುವ ಪುಟ್ಟ ಬಾಗಿಲದಿಂದಲೇ ವೇದಿಕೆಗೆ ಕರೆತಂದದ್ದು ಸಭಿಕರಲ್ಲಿ ಕುತೂಹಲ ಕೆರಳಿಸಿತು. ಸ್ವಾಗತ ಸಮಿತಿ ಅಧ್ಯಕ್ಷ ಖಮರುಲ್ ಇಸ್ಲಾಂ ದೇಶಿತನದ ವೇದಿಕೆಯನ್ನು ಹೊಗಳಿದರು. ಕಸಾಪ ರಂಗಮಂದಿರ ಕಾಮಗಾರಿ ಪೂರ್ಣಗೊಳ್ಳಲು ತಮ್ಮ ಅನುದಾನದಿಂದ 5 ಲಕ್ಷ ನೀಡುವ ಮಾತುಗಳನ್ನಾಡಿದರು. ಸಮ್ಮೇಳನಾಧ್ಯಕ್ಷ ಲಾಲ್ ಅಹ್ಮದ್ ಬಂದೇ ನವಾಜ ಆಲ್ದಾಳ್ರಿಗೆ ವೈಯಕ್ತಿಕವಾಗಿ 1 ಲಕ್ಷ ಸಹಾಯಧನ ಚೆಕ್ ನೀಡಿ ಅಭಿನಂದಿಸಿದರು. ಪ್ರತಿಭೆಗೆ ಜಾತಿ ಮಾನದಂಡವಾಗಬಾರದು ಎಂದು ಸಮ್ಮೇಳನಾಧ್ಯಕ್ಷರನ್ನು ಗೌರವಿಸಿದ್ದಕ್ಕೆ ತಮಗೆ ಖುಷಿಯಾಗಿದೆ ಎಂದರಲ್ಲದೆ, ಆಲ್ದಾಳ್ ಮುಸ್ಲಿಂ ಸಮಾಜವರಾಗಿದ್ದಕ್ಕೆ ಅವರನ್ನು ಅಭಿನಂದಿಸಲು ಹೆಮ್ಮೆಯಾಗಿದೆ ಎಂದೂ ಹೇಳಿದರು.
ಕೀಳರಿಮೆ ಬಿಟ್ಟುಬಿಡಿ- ಕುಸ್ನೂರ್: ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ಅಸಂಗತ ನಾಟಕಕಾರ ಚಂದ್ರಕಾಂತ ಕುಸ್ನೂರ್ ಮಾತನಾಡಿ, ಹೈ-ಕ ನೆಲದವರು ಪ್ರತಿಭೆಯಲ್ಲಿ ಕಮ್ಮಿಯಿಲ್ಲ. ಆದರೂ ಕೀಳರಿಮೆಯಿಂದಾಗಿ ಹಿಂದುಳಿದಿದ್ದಾರೆ. ಇಲ್ಲಿನವರು 80 ಪುಸ್ತಕ ಬರೆದರೂ ಎಲೆಮರೆ ಕಾಯಿ, ಹಳೆ ಮೈಸೂರು, ಬೆಂಗಳೂರು, ಮಂಗಳೂರಿನವರು ಎರಡು ಕೃತಿ ಬರೆದರೂ ಮಿಂಚುತ್ತಾರೆ. ಪ್ರತಿಭೆ ಇದ್ದಾಗ ಹೆದರಿಕೆ ಯಾಕೆ, ಅದನ್ನೆಲ್ಲ ಬಿಟ್ಟು ಜನಪರ ಕಾಳಜಿಯಿಂದ ನಿಮ್ಮ ಪ್ರತಿಭೆಗೆ ಕೆಲಸ ಕೊಡಿ ಎಂದು ಕರೆ ನೀಡಿದರು.
ನಾಟಕ ರಚನಾಕಾರರು ಕೈಬೆರಳೆಣಿಕೆಯಷ್ಟು. ಅದರಲ್ಲೂ 1960ರ ದಶಕದಲ್ಲಿ ಅಸಗಂತ ನಾಟಕ ಗುಲ್ಬರ್ಗದಲ್ಲೇ ಹುಟ್ಟಿತು. ಹೀಗಿದ್ದರೂ ಈಚೆಗಿನ ದಿನಗಳಲ್ಲಿ ಕೆಲವೇ ಕೆಲವರು ಪ್ರಸಿದ್ಧ ನಾಟಕರಾರು ಎಂದು ಬಿಂಬಿಸಲಾಗುತ್ತಿದೆ. ಇದು ಸಂಚು ಎಂದು ತೋರುತ್ತದೆ. ಸಾರಸ್ವತ ಲೋಕದಲ್ಲಿಯೂ ಇಂತಹ ಸಂಚುಗಾರಿಕೆ ನಡೆದರೆ ಹೇಗೆ ಅದನ್ನೆಲ್ಲ ನಾವು ಮೆಟ್ಟಿ ನಿಲ್ಲಬೇಕಾಗಿದೆ ಎಂದರು.
ಸ್ಥಳೀಯ ಪ್ರತಿಭೆಗಳು ವಿವಿಧ ಕಾರಣಗಳಿಂದ ಹೊರಗಡೆ ಹೆಸರು ಪಡೆಯುವುದೇ ಇಲ್ಲ. ಆಗ ಕಸಾಪದಂತಹ ಜಿಲ್ಲಾ ಮಟ್ಟದ ಸಂಸ್ಥೆಗಳು ಆ ಕೆಲಸವನ್ನು ಚಾಚೂ ತಪ್ಪದೆ ಮಾಡಬೇಕು. ಗುಲ್ಬರ್ಗ ಭಾಗದ ಸಾಹಿತ್ಯವನ್ನು ವಿಮರ್ಶೆ ಮಾಡಲು, ಆ ಬಗ್ಗೆ ಮಾತನಾಡಲು ಹಳೆ ಮೈಸೂರು, ಬೆಂಗಳೂರಿನ ಪುರೋಹಿತರು ಬೇಕಾಗಿಲ್ಲ. ನಮ್ಮಲ್ಲೇ ವಿದ್ವಾಂಸರಿದ್ದಾರೆ, ಅವರಿಗೆ ಆ ಕೆಲಸ ಕೊಡೋಣ ಎಂದು ಹೇಳಿದರು.
ವೆಬ್ ಸೈಟ್ ಆರಂಭ: ಕಸಾಪ ಗುಲ್ಬರ್ಗ ತನ್ನದೇ ಆದಂತಹ ವೆಬ್ಸೈಟ್ ಹೊಂದಿದ್ದು ಸಮ್ಮೇಳನದಲ್ಲಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಲೋಕಾರ್ಪಣೆ ಮಾಡಿದರು. ಡಾ. ಚೆನ್ನಣ್ಣ, ಡಾ. ವಸಂತ ಕುಷ್ಟಗಿ ಸೇರಿದಂತೆ ಈ ಭಾಗದ 100ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿ ಈಗಾಗಲೇ ಅಪ್ಲೋಡ್ ಮಾಡಲಾಗಿದೆ. ಬರುವ ದಿನಗಳಲ್ಲಿ ಗುಲ್ಬರ್ಗ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನೆಲ್ಲ ಈ ಸೈಟ್ನಲ್ಲಿ ನೀಡಲಾಗುತ್ತದೆ ಎಂದರು. ಸ್ಥಳೀಯವಾಗಿ ಸಂತೋಷ ಹೊನಗುಂಟೀಕರ್ ಈ ವೆಬ್ಸೈಟ್ ನಿರ್ಮಿಸಿದ್ದಾರೆ. ಕಸಾಪಗಳ ಕೇಂದ್ರ ಕಚೇರಿಯೊಂದೇ ಇದುವರೆಗೂ ವೆಬ್ಸೈಟ್ ಹೊಂದಿತ್ತು. ಇದೀಗ ಗುಲ್ಬರ್ಗ ಕಸಾಪ ಘಟಕ ತನ್ನದೇ ವೆಬ್ಸೈಟ್ ಆರಂಭಿಸಿ ಮಾದರಿಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಹೇಳಿದ್ದಾರೆ. ವೆಬ್ಸೈಟ್ ವಿಳಾಸ- ಢಿಢಿಢಿ.್ಞಛಟಛಛ್ಡ್ಠ್ಜ್ಝ್ಞಿಛಟಿಟಿಛಜಛ.್ಛ್ಟಟ
13 ಕೃತಿಗಳ ಬಿಡುಗಡೆ: 13ನೇ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಾರಥಿ, ರಂಗ ಸಾಮ್ರಾಟ್, ಮಾಧ್ಯಮ ಲೋಕ, ಗಂಜೀಫಾ ಕಲೆ, ಜ್ಞಾನಪೀಠ ಪುರಸ್ಕೃತ ಉಮಾಶಂಕರ, ಲಿಲತ ಸಾಹಿತ್ಯ ಸಮೀಕ್ಷೆ, ಜಮಖಂಡಿ ಶಿವಶರಣ ಅಣ್ಣಯ್ಯ, ದೋರನಳ್ಳಿ ಮಹಾಂತೇಶ್ವರ ಪುರಾಣ, ಬೆಳ್ಳಿ ಮೂಡಿತು, ಹೃದಯಾಂತರಾಳ, ಹುತಾತ್ಮ ಅಪ್ಪಾರಾವ ಪಾಟೀಲ್, ನೊಂದು ನಲಿದವರು, ಇತಿಹಾಸ ಬೋಧನಾ ವಿಧಾನ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯ್ತು.
ಪಿ.ಪರುಶುರಾಮ ನೇತೃತ್ವದಲ್ಲಿ ನಡೆದ ಚಿತ್ರಕಲಾಕೃತಿಗಳ ಶಿಬಿರದಲ್ಲಿ ರಚನೆಯಾಗಿರುವ 120ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನವನ್ನೂ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯ್ತು.