ಕವಿಗೋಷ್ಠಿ; ಮಿಡಿಯಲಿಲ್ಲ ಜೀವದನಿ
(ಶ್ರೀ ವಿಜಯ ಮಹಾಮಂಟಪ)
ಶರಣಬಸವೇಶ್ವರ- ಬಂದೇ ನವಾಜ್ ವೇದಿಕೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.16
ತುಂಬ ಕುತೂಹಲ ಕೆರಳಿಸಿದ್ದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಜೀವದನಿ ಮಿಡಿಯಲಿ... ಎಂಬ ಆಶಯದ ಯುವ ಕವಿಗೋಷ್ಠಿ ನಿರೀಕ್ಷೆಯಂತೆ ಮೂಡಿ ಬರಲಿಲ್ಲ. ಭಾಗವಹಿಸಿದ್ದ 35ಕ್ಕೂ ಹೆಚ್ಚು ಕವಿಗಳಲ್ಲಿ ಕಾವ್ಯದ ಲಕ್ಷಣಗಳಿರುವ ನಾಲ್ಕಾರು ಕವನಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕವನಗಳು ಕಾವ್ಯಕ್ಕಿಂತ ಗದ್ಯದಂತೆ ಮೂಡಿ ಬಂದವು.
ಕವಿಗೋಷ್ಠಿಯ ಕೆಲವು ಸಂದರ್ಭಗಳಲ್ಲಂತೂ ಕವಿ ಕವನ ಪ್ರಸ್ತುತ ಪಡಿಸುತ್ತಿದ್ದಾನೋ, ಮಾತನಾಡುತ್ತಿದ್ದಾನೋ ಎಂಬಂತಹ ದ್ವಂದ್ವ ಸಭಿಕರನ್ನು ಕಾಡಿತ್ತು. ಅದಕ್ಕೇ ಅನೇಕರು ಮೈಪೂರಾ ಕಿವಿಯಾಗಿಸಿಕೊಂಡು ಕುಳಿತರೂ ಕವನದ ಆದಿ- ಅಂತ್ಯ ತಿಳಿಯದೆ ತಮ್ಮೊಳಗೆ ಚರ್ಚಿಸುತ್ತಿದ್ದ ನೋಟಗಳು ಕಂಡವು.
ಕವಿಗೋಷ್ಠಿಯ ಮುಖ್ಯ ಅತಿಥಿ ಡಾ. ಡಿ.ಬಿ ನಾಯಕ, ಅಧ್ಯಕ್ಷ ಎ.ಕೆ. ರಾಮೇಶ್ವರ ಅವರಿಬ್ಬರೂ ಗೋಷ್ಠಿಯ ನಂತರ 'ಹೆಚ್ಚು ಓದಿ ಕಾವ್ಯ ಬರೆಯಿರಿ' ಎಂದು ನೇರವಾಗಿಯೇ ಸೇರಿದ್ದ ಕವಿಗಳಿಗೆ ಕಿವಿಮಾತು ಹೇಳಿದರು. ಅಲ್ಲದೆ, ಕಾವ್ಯದ ಗುಣಲಕ್ಷಣ ಅರಿತು ಬರೆಯಿರಿ, ಬರೆದಂತೆಯೇ ಅದನ್ನು ಅಚ್ಚುಕಟ್ಟಾಗಿ ಎಲ್ಲರಿಗೂ ತಿಳಿಯುವ ಹಾಗೆ ಪ್ರಸ್ತುತಪಡಿಸಿರಿ, ಕಾವ್ಯ ಅದೊಂದು ಕಲೆ, ಪರಿಶ್ರಮ ಇಲ್ಲದೆಯೇ ಅದು ಒಲಿಯೋದಿಲ್ಲ ಎಂದರು.
ಕವಿಯಾದವನಿಗೆ ತಾನಿರುವ ಪರಿಸರದ ಜ್ಞಾನವಿರಬೇಕು, ಸುತ್ತಲಿನ ಘಟನಾವಳಿಗಳು, ಆ ನೆಲದ ಇತಿಹಾಸ ಗೊತ್ತಿರಬೇಕು. ಅಂದಾಗ ಸುಂದರ ಹಾಗೂ ಮನಮುಟ್ಟುವ ಕವನಗಳು ಹೊರಬರುತ್ತವೆ. ನಿನ್ನ ಮುಖ ನೋಡದೆ ಹೋದರೆ ಮನದಾಗ ಏನ್ನೋ ಆಗತೈತಿ.. ಎಂಬ ಸಾಲುಗಳ ಪ್ರೇಮ ನಿವೇದನೆ, ವಿರಹ ವೇದನೆಯ ಕವನಗಳಿಗಿಂತ ಜನಮನದಲ್ಲಿ ಚಿಂತನೆಯ ಹೊಸಬೀಜ ಬಿತ್ತುವಂತಹ ಕವನಗಳು ಇಂದು ಕವಿಗಳು ಬರೆಯುವಂತಾಗಬೇಕೆಂದು ಡಾ. ನಾಯಕ ಹೇಳಿದರು.
ವಲಸೆ, ಮ್ಯಾಚ್ ಫಿಕ್ಸಿಂಗ್ಗೆ, ಸಂಪನ್ಮೂಲ ಲೂಟಿ: ಗೋಷ್ಠಿಯ ಆರಂಭದಲ್ಲಿ ಶಿವಾನಂದ ಅಣಜಗಿ ಅವರ ಒಳಒಪ್ಪಂದಕ್ಕೊಳಪಟ್ಟಿದೆ ಎಂಬ ಶೀರ್ಷಿಕೆಯ ಕವಿತೆ ಹೊಸ ಸರ್ಕಾರದ 1ರ ಕೆಜಿ ಅಕ್ಕಿ ಘೋಷಣೆ, ಶಾಸಕರ ಸಾರಥ್ಯದಲ್ಲಿನ ಉಚಿತ ಮದುವೆ ಸಮಾರಂಭಗಳತ್ತ ಕ್ಷಕಿರಣ ಬೀರಿ ಜನಮನ ಸೆಳೆದರೆ, ಹೊಸ ಬಗೆಯಲ್ಲಿ ರಚಿಸಿ ಪ್ರಸ್ತುತಪಡಿಸಿದ್ದ ಬಾಬು ಜಾಧವ ಅವರ ಗೀತೆಯೂ ಸೇರಿದ್ದವರನ್ನು ಬಹುವಾಗಿ ಸೆಳೆಯಿತು.
ಹಸಿದ ಹೊಟ್ಯಾಗ ಬೆಂಕಿ ಕಟ್ಟಿಕೊಂಡು
ಮಾನ ಮರ್ಯಾದಿಗೆ ಬಟ್ಟಿ ಉಟ್ಟುಕೊಂಡು
ಸಾಲದ ಶೂಲ ಕೊರಳಿಗೆ ಕಟ್ಟಿಕೊಂಡು
ಸಾಯೋತಂಕಾ ಜೀತ ಮಾಡ್ಕೊಂಡು... ॥
ಈ ನಾಡ ಕಟ್ಟಿದ ಬಡವರೆಲ್ಲರೂ
ಊರ- ಕೇರಿ ಬಿಟ್ಟಾರಲ್ಲೋ...
ಭ್ರಷ್ಟರಿಂದ ಸುಲಿಗೆ ಮಾಡಿಸಿಕೊಂಡು
ಮುಂಗಡ ಚಕ್ರಪಟ್ಟಿ ತಲಿಗೆ ಕಟ್ಟಿಕೊಂಡು
ಹದ್ದುಮೀರಿ ಹಡದ ಮಕ್ಳ ಕಟ್ಟಿಕೊಂಡು... ॥
ಎಂದು ಸಾಗುವ ಕನ್ನಡಿಗರು ಕೆಲಸ ಅರಸುತ್ತ ಮುಂಬೈ- ಪುಣೆಗೆ ಗುಳೆ ಹೋಗುವ ಕವನ ಸಭಿಕರಿಂದ ಕಿವಿಗಡಚಿಕ್ಕುವಂತಹ ಕರತಾಡನ ಪಡೆಯಿತು.
ಮಡಿವಾಳಪ್ಪ ನಾಗರಾಳರ ಪುಣ್ಯಭೂಮಿಯಲ್ಲಿ ಭ್ರಷ್ಟರು ಸೇರಿಕೊಂಡು ನಿಸರ್ಗ ಸಂಪನ್ಮೂಲ ಲೂಟಿ ಹೊಡೆಯುತ್ತಿದ್ದಾರೆ, ಬಿಪಿಎಲ್, ಎಪಿಎಲ್ ಪಡಿತರದಲ್ಲೇ ಇಂದು ಐಪಿಎಲ್ ಇಣುಕಿದೆ ಎಂಬ ಇಂದಿನ ಕ್ರಿಕೆಟ್ ಆಟದ ಹಗರಣ ಲೇವಡಿ ಮಾಡುವ ಕವನ, ಶರಣಬಸಪ್ಪ ಓಗೆ ಅವರ ಚುನಾವಣೇಶ್ವರನ ಜಾತ್ರೆ, ವೆಂಕಟೇಶ ಜನಾದ್ರಿ ಅವರ ಬಸವ ತತ್ವ- ಸಿದ್ಧಾಂತಗಳ ಆಧಾರದ ಕವನಗಳು ಜನರ ಸ್ಪಂದನೆ ರೂಪದ ಚಪ್ಪಾಳೆ ಪಡೆಯುವಲ್ಲಿ ಯಶಸ್ವಿಯಾದವು.
ಉಳಿದಂತೆ ಕವಿಗೋಷ್ಠಿಯಲ್ಲಿ ಸಾವಿತ್ರಿ ಚಾಂದಕವಠೆ, ರಾಜು ಉದ್ನೂರ್, ಮಲ್ಲೀನಾಥ, ಸಿದ್ದಣ್ಣ ಕನ್ನಡಗಿ, ಸಂತೋಷ ತೋಟ್ನಳಿ, ಅರುಣ ಯಲಶೆಟ್ಟಿ, ಸಿಎಸ್ ಮಾಲೀಪಾಟೀಲ್, ಶ್ರೀಮಂತ ಅಟ್ಟೂರ್, ಲಕ್ಷಣ ರಂಜೋಳಕರ್, ಕೆ.ಗಿರಿಮಲ್ಲ, ಪರ್ವಿನ್ ಸುಲ್ತಾನಾ ಸೇಡಂ, ಮಂಗಳಾ, ಗುರುರಾಜ ಕುಲ್ಕರ್ಣಿ, ಕವಿತಾ ಹಳ್ಳಿ, ಜಯಶ್ರೀ, ಎಂಬಿ ನಿಂಗಪ್ಪ, ಮೃತ್ಯುಂಜಯ, ಶಿವಶಾಂತರೆಡ್ಡಿ ಕವನ ವಾಚಿಸಿದರು.