ಅಭಿವೃದ್ಧಿಗೆ ಪೂರಕ ನಿಯಮಾವಳಿ
ಕ.ಪ್ರ. ವಾರ್ತೆ , ಲಿಂಗಸ್ಗೂರು , ಜೂ.17
ಹೈದ್ರಾಬಾದ್ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ನನ್ನನ್ನು ನಿಯಮಾವಳಿ ಅನುಷ್ಠಾನ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದು, ಈ ಭಾಗದ ಅಭಿವೃದ್ಧಿಗೆ ಪೂರಕ ನಿಯಮಾವಳಿ ರೂಪಿಸಲು ಬದ್ಧರಾಗಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರರ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371(ಜೆ) ಕಲಂ ತಿದ್ದುಪಡಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸಂತಸದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಅಭಿವೃದ್ಧಿಗೆ ತಕ್ಕಂತೆ ನಿಯಮಾವಳಿ ರೂಪಿಸಲು ಬೇಕಾದ ಆಡಳಿತಾತ್ಮಕ ಸಂಸ್ಥೆಗಳನ್ನು ಹುಟ್ಟುಹಾಕಲು ಹಲವು ಜನ ಸಚಿವರನ್ನೊಳಗೊಂಡ ಸಮಿತಿಗೆ ಸರ್ಕಾರ ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ನಿಗದಿತ ಅವಧಿಯೊಳಗೆ ವರದಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಸಮಗ್ರ ಅಧ್ಯಯನ: ರಾಜ್ಯ ಸರ್ಕಾರ ಹೈದ್ರಾಬಾದ್ ಕರ್ನಾಟಕ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ವಿಶೇಷ ಆಸಕ್ತಿ ತೋರಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಭಾಗದ ಅಗತ್ಯತೆ ಕುರಿತು ಸಮಗ್ರ ಅಧ್ಯಯನ ನಡೆಸಿ ಕರಡು ತಯಾರಿಸುವ ಜವಬ್ದಾರಿ ನಮಗೆ ನೀಡಲಾಗಿದೆ. ಉಪಸಮಿತಿಯಿಂದ ಈಗಾಗಲೇ ಪ್ರಥಮ ಸಭೆ ನಡೆಸಲಾಗಿದ್ದು, ಜೂ. 19ರಂದು ಮತ್ತೊಂದು ಸಭೆ ನಡೆಸಿ ಕಾರ್ಯಕ್ರಮಗಳ ವೇಳಾಪಟ್ಟಿ ಸಿದ್ಧಪಡಿಸಲಾಗುವುದು ಎಂದರು.
ರಾಯಚೂರು ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಆರ್ಸೆನಿಕ್ ಅಂಶವುಳ್ಳ ನೀರು ಪೂರೈಕೆಯಾಗುತ್ತಿರುವುದು ನೋವಿನ ಸಂಗತಿ. ಪಂಚಾಯತ್ರಾಜ್ ಸಚಿವರಾದ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ್ದು, ಪಾಮನಕಲ್ಲೂರು, ಚಿಂಚರಕಿ, ವಂದಲಿ, ಊಟಿ, ಹಟ್ಟಿ, ಕವಿತಾಳ, ಪಲಕನಮರಡಿ, ಗಬ್ಬೂರ ಸೇರಿದಂತೆ ಏಂಟತ್ತು ಹಳ್ಳಿಗಳಿಗೆ ಭೇಟಿ ನೀಡಿ ವೀಕ್ಷಿಸಿ, ವಸ್ತುಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ಶುದ್ಧ ಕುಡಿಯುವ ನೀರು ಪೂರೈಸಲು ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾರ್ಗೋಪಾಯದ ಕಂಡುಕೊಳ್ಳಲಾಗುವುದೆಂದು ಹೇಳಿದರು.
ಸ್ಪಂದಿಸುವಿಕೆ: ರಾಜ್ಯದ ಗ್ರಾಮೀಣ ಪ್ರದೇಶದ ಬಡಜನರ ಬದುಕಿನ ಅವಶ್ಯಕತೆಗಳ ಬಗ್ಗೆ ಚಿಂತನೆ ನಡೆಸಬೇಕಿರುವುದು ಅಗತ್ಯವಾಗಿದ್ದು, ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ಕರ್ನಾಟಕ ಲೈವ್ಲಿವುಡ್ ಮಿಷನ್ ಮೂಲಕ ಜನರ ಆಶಾದಾಯಕ ಶುದ್ಧ ಕುಡಿವ ನೀರು, ಶೌಚಾಲಯ, ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಉದ್ಯೋಗ ಸೃಷ್ಟಿ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ಯೋಜನೆ ಪೂರೈಸುವ ಕುರಿತು ಕೇಂದ್ರ ಸಚಿವ ಜಯರಾಂ ರಮೇಶ್ ಅವರಿಗೆ ಮನವಿ ಮಾಡಿದಾಗ ಅವರು ಸಮರ್ಪಕವಾಗಿ ಸ್ಪಂದನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿಗೆ ಆದ್ಯತೆ: ಇಂತಹ ಕಾರ್ಯಕ್ರಮಗಳಿಗೆ ಈ ಹಿಂದೆ ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಚಿಂತನೆಗಳು ನಡೆದಿಲ್ಲ. ಅಲ್ಲದೆ ಗ್ರಾಮೀಣ ಜನರ ಸಮಸ್ಯೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖಂಡರು ಗಮನಿಸಿದರೂ ಪರಿಹಾರಕೊಂಡು ಸ್ಪಂದಿಸುವಲ್ಲಿ ನಿರಾಸಕ್ತಿ ತೋರುತ್ತೇವೆ. ಗ್ರಾಮೀಣ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕುರಿತು ಪುನರ್ ವ್ಯಾಖ್ಯಾನ ಆಗಬೇಕಾಗಿದ್ದು, ಇಲಾಖೆಯಿಂದ ಸವಲತ್ತುಗಳನ್ನು ಒದಗಿಸಲು ತಾವು ಬದ್ಧರಾಗಿದ್ದು, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಸದಸ್ಯ(ಮುದಗಲ್) ಶರಣಗೌಡ ಪಾಟೀಲ್ ಬಯ್ಯಾಪುರ, ಜಿಪಂ ಸದಸ್ಯ ಭೂಪನಗೌಡ ಕರಡಕಲ್, ಮುಖಂಡರಾದ ಶರಣಬಸಪ್ಪ ಗುಡದನಾಳ, ಗುಂಡಪ್ಪ ನಾಯಕ, ಖಾದರಪಾಶಾ, ಮುದುಕಪ್ಪ ವಕೀಲರು, ಡಿ.ಜಿ. ಗುರಿಕಾರ, ಅಂದಾನಪ್ಪ ಗುಂಡಳ್ಳಿ, ಎಂ.ಡಿ. ರಫೀ, ಕುಮಾರಸ್ವಾಮಿ ಸಾಲ್ಮನಿ, ಚೆನ್ನಾರೆಡ್ಡಿ ಬಿರಾದಾರ, ಮಹಾಂತೇಶ ಇದ್ದರು.