ಉಪ್ಪರ್ ಶೇರವಾನಿ, ಅಂದರ್ ಪರೇಶಾನಿ...
ಕ.ಪ್ರ.ವಾರ್ತೆ ಕೆಂಭಾವಿ ಜೂ.17
ಗುಣಮಟ್ಟದ ಶಿಕ್ಷಣಕ್ಕಾಗಿ ನಾವು ಬದ್ಧರಾಗಿದ್ದು ಹಲವಾರು ಯೋಜನೆಗಳಡಿ ಕಟ್ಟಡ, ಶಿಕ್ಷಕರನ್ನು ನೀಡಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಗೌಡಗೇರಾ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 581 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಉತ್ತಮ ಕಟ್ಟಡವೂ ಇದೆ. ಆದರೆ ಶಿಕ್ಷಕರ ಕೊರತೆಯಿಂದಾಗಿ ಗೌಡಗೇರಿ ಶಾಲೆ ಉಪ್ಪರ್ ಶೇರವಾನಿ, ಅಂದರ್ ಪರೇಶಾನಿ ಎಂಬಂತಾಗಿದೆ.
ಈ ಶಾಲೆಯಲ್ಲಿ 11 ಶಿಕ್ಷಕರ ಹುದ್ದೆ ಮಂಜೂರಾತಿ ಇದ್ದು, ಈಗ ಮುಖ್ಯೋಪಾದ್ಯಯ ಸೇರಿ 5 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಲು ಕಾರಣ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಿದ್ದೇವೆ, ಗಣಕಯಂತ್ರ, ಪ್ರಯೋಗಾಲಯ, ನೀರು, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿದ್ದೇವೆಂದು ಹೇಳುವ ಅಧಿಕಾರಿಗಳ ಕಣ್ಣಿಗೆ ಈ ಶಾಲೆ ಕಾಣಿಸುತ್ತಿಲ್ಲವೇ ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ.
ಉತ್ತಮ ಶಿಕ್ಷಣದಿಂದ ಮಕ್ಕಳು ವಂಚಿತ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಲಿ ಹಾಗೂ ಪ್ರೌಢ ಶಾಲೆಯವರೆಗೆ ತರಗತಿ ಆರಂಭವಾಗಲಿ ಎಂಬ ಉದ್ದೇಶದಿಂದ ನೀರಾವರಿ ಪ್ರದೇಶದ ಬೆಲೆ ಬಾಳುವ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಆದರೆ ಅಧಿಕಾರಿಗಳು 8ನೇ ತರಗತಿವರೆಗೆ ಶಾಲೆ ಪ್ರಾರಂಭಿಸಿದ್ದು, ಶಿಕ್ಷಕರನ್ನು ನೀಡದೆ ಗುಣಮಟ್ಟದ ಶಿಕ್ಷಣದಿಂದ ವಂಚಿಸಲಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರ ಕೊತೆಯಿಂದ ತಮ್ಮ ಮಕ್ಕಳನ್ನು ಸಮೀಪದ ಕೆಂಭಾವಿ, ಸುರಪುರ ಶಾಲೆಗಳಿಗೆ ಕಳುಹಿಸುವ ಪರಿಸ್ಥಿತಿ ಬಂದಿದೆ.
ಅಲ್ಲದೇ ಇಲ್ಲಿ ಈ ಬಾರಿ 9ನೇ ತರಗತಿಯನ್ನು ಪ್ರಾರಭಿಸಬೇಕಿತ್ತು. ಆದರೆ ಸರ್ಕಾರ ತರಗತಿ ಪ್ರಾರಂಬಿಸದೇ ದೂರದ ಊರುಗಳಿಗೆ ಮಕ್ಕಳು ಅಲೆದಾಡುವಂತೆ ಮಾಡಿದೆ ಎಂದು ದಲಿತ ಮುಖಂಡ ವಿರುಪಾಕ್ಷಿ ಕರಡಕಲ್ ಆರೋಪಿದ್ದಾರೆ.
ಖಾಸಗಿ ಶಾಲೆಗಳಿಗೆ ಪರೋಕ್ಷ ನೆರವು?: ಹಲವಾರು ಖಾಸಗಿ ಶಾಲೆಗಳು ತಲೆಯೆತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಖಾಸಗಿ ಶಾಲೆಗಳಿಗೆ ಸರ್ಕಾರವೇ ಪರೋಕ್ಷವಾಗಿ ನೆರವು ಮಾಡಿದಂತಾಗುತ್ತಿದೆ. ಇದರಿಂದ ಖಾಸಗಿ ಶಾಲೆಗಳ ದಾಖಲಾತಿ ಏರುತ್ತಿದ್ದು ಸರ್ಕಾರಿ ಶಾಲೆಗಳು ಬಿಕೋ ಎನ್ನುತ್ತಿವೆ. ಖಾಲಿ ಹುದ್ದೆಗಳನ್ನು ತುಂಬುವುದರ ಜತೆಗೆ ಶಾಲೆಗೆ ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.