ಪಾರಮಾರ್ಥಿಕ ಜೀವನದ ಮುಕ್ತಿಗೆ ಗುರು ಅಗತ್ಯ
ಕೆಂಭಾವಿ: ಸಂಸಾರವೆಂಬ ಪಾರಮಾರ್ಥಿಕ ಜೀವನದಿಂದ ಮುಕ್ತಿ ಹೊಂದಬೇಕಾದರೆ ಜೀವನದಲ್ಲಿ ಒಬ್ಬ ಗುರು ಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ ಹೇಳಿದರು.
ಸಮೀಪದ ಪರಸನಹಳ್ಳಿಯಲ್ಲಿ ದತ್ತಗುರು ಸದಾನಂದ ಮಹರಾಜರ 7ನೇ ಆಶ್ರಮ ಹಾಗೂ ದತ್ತಾತ್ರಯ ಮೂರ್ತಿ ಪ್ರತಿಷ್ಠಾಪನೆ, ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಗುರುವಿನ ಕರುಣೆ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.. ಎಂಬಂತೆ ಗುರುಗಳ ಸೇವೆ ಮಾಡಿ ಮುಕ್ತಿ ಹೊಂದಬೇಕು. ಪ್ರಪಂಚದಲ್ಲಿ ದೇವರ ಪ್ರತಿರೂಪವಾಗಿ ಸನ್ಯಾಸಿಗಳು ಜನ್ಮತಾಳಿ ಬಂದಿರುತ್ತಾರೆ. ಅಂಥ ಸನ್ಯಾಸಿಗಳಲ್ಲಿ ಸದಾನಂದ ಮಹಾರಾಜರು ಒಬ್ಬರಾಗಿದ್ದು, ಜಾತಿ-ಮತ- ಭೇದವಿಲ್ಲದೆ ಭಕ್ತಿ ಮಾರ್ಗವೆಂಬ ಸಂದೇಶ ಜನರಿಗೆ ನೀಡಿದರು.
ನಿಸ್ವಾರ್ಥ ಸೇವೆಯಿಂದ ದೇವರ ಒಲವು: ಭಕ್ತಿಗೆ ಯಾವ ಜ್ಞಾನ ಬೇಕಾಗಿಲ್ಲ. ನಿಷ್ಕಲ್ಮಶವಾದ ಭಕ್ತಿ ಯಾರಲ್ಲಿ ಇರುತ್ತದೆಯೋ ಅವರು ನಿಶ್ಚಯವಾಗಿ ಜೀವನದಲ್ಲಿ ಗೆಲವು ಸಾಧಿಸುತ್ತಾರೆ.
ಹಿರಿಯ ಐಎಎಸ್ ಅಧಿಕಾರಿ ದಳವಾಯಿ ಮಾತನಾಡಿ, ಸಂಸಾರದ ಮಾಯೆಯಿಂದ ಹೊರಬಂದು ಇನ್ನೊಂದು ಲೋಕವನ್ನು ತೋರಿಸಿಕೊಡುವವರೇ ಗುರುಗಳು. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮುಕ್ತಿ ದೊರೆಯಲಿದೆ.
ತಾಂತ್ರಿಕ ಶಿಕ್ಷಣ ಕಾಲೇಜು ಸ್ಥಾಪನೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರ ಅವರು ಸದಾನಂದ ಬಾಬಾರವರ ಪರಮ ಶಿಷ್ಯರಾಗಿದ್ದು, ಬಾಬಾರ ಹುಟ್ಟೂರಿನಲ್ಲಿ ಅವರ ಆಶ್ರಮ ಪ್ರಾರಂಭಿಸಿ ಗುರುಕಾಣಿಕೆಯಾಗಿ ಸಲ್ಲಸಿದ್ದಾರೆ. ಬಾಬಾ ತಿಳಿಸಿದಂತೆ ಇದೇ ಆಶ್ರಮದಲ್ಲಿ ಮಕ್ಕಳ ಶಿಕ್ಷಣ ಮಟ್ಟ ಸುಧಾರಿಸಲು ತಾಂತ್ರಿಕ ಶಿಕ್ಷಣ ಕಾಲೇಜು ಸ್ಥಾಪಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಆಶ್ರಮಕ್ಕೆ ಭೂಮಿ ದಾನ ಮಾಡಿದ ಹಳ್ಳೆಪ್ಪಗೌಡ ಪೊಲೀಸ್ ಪಾಟೀಲರನ್ನು ಸನ್ಮಾನಿಸಿ, ಜಿಲ್ಲಾಧಿಕಾರಿ, ಅಶ್ವಥ, ಕೋದಂಡರಾಮ ಇದ್ದರು. ರಾಜ್ಯ, ಹೊರ ರಾಜ್ಯಗಳಿಂದ ಭಕ್ತಾರು ಭಾಗವಹಿಸಿದ್ದರು.