ವಸತಿ ಶಾಲೆ ಅವ್ಯವಸ್ಥೆ, ಜಿಪಂ ಉಪಾಧ್ಯಕ್ಷರ ಅಸಮಾಧಾನ
ಕ.ಪ್ರ.ವಾರ್ತೆ ಯಾದಗಿರಿ ಜೂ.17
ನಗರದ ಹೊಸಳ್ಳಿ ಕ್ರಾಸ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಅವ್ಯವಸ್ಥೆಯನ್ನು ಕಂಡು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಸಮೀಪದ ಖಾಸಗಿ ಮನೆಯೊಂದರಲ್ಲಿ ನಡೆಸಲಾಗುತ್ತಿರುವ ಹೆಣ್ಣು ಮಕ್ಕಳ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೋಮವಾರ ಭೇಟಿ ನೀಡಿದಾಗ, ಶಾಲೆಯಲ್ಲಿ ಶಿಕ್ಷಕರು ಮತ್ತು ಪ್ರಾಂಶುಪಾಲರು ಗೈರು ಹಾಜರಿದ್ದರು. ಶಾಲೆ ಪ್ರಾರಂಭಗೊಂಡು 15 ದಿನ ಕಳೆದರೂ ಮಕ್ಕಳಿಗೆ ದೈನಂದಿಕ ಬಳಕೆಯ ಕಿಟ್ ಮತ್ತು ನೋಟ್ ಪುಸ್ತಕಗಳನ್ನು ವಿತರಣೆ ಮಾಡಿಲ್ಲ. ಬೂಟು ಇತ್ಯಾದಿ ಸಾಮಗ್ರಿ ಬಂದರೂ ವಿತರಣೆ ಮಾಡಿಲ್ಲ ಎಂಬ ವಿಷಯ ಬಹಿರಂಗಗೊಂಡಿತು. ವಿತರಣೆಯ ಬಗ್ಗೆ ಪ್ರಶ್ನಿಸಿದರೆ ಶಿಕ್ಷಕರು ಹಾರಿಕೆ ಉತ್ತರ ಕೇಳಿ ಬಂದವು.
ಸರ್ಕಾರದ ಸೌಲಭ್ಯ ಬಳಕೆಯಿಲ್ಲ: ಈ ಶಾಲೆ ತಾಲೂಕಿನ ವರ್ಕನಳ್ಳಿ ಗ್ರಾಮಕ್ಕೆ ಮಂಜೂರಾತಿಯಾಗಿದ್ದು, ನಿವೇಶನವಿಲ್ಲದ ಕಾರಣ ನಗರದಲ್ಲಿ ನಡೆಸಲಾಗುತ್ತಿದೆ. ಸ್ಥಳದ ಕೊರತೆಯಿಂದ ಸರ್ಕಾರ ಮಕ್ಕಳಿಗಾಗಿ ಒದಗಿಸಿದ ಗಾದಿ ಮತ್ತು ಮಂಚಗಳು ಮೂಲೆಗುಂಪಾಗಿ ಧೂಳು ತಿನ್ನುತ್ತಿರುವುದು ಕಂಡು ಬಂದಿತು. ಮಕ್ಕಳು ನೆಲದ ಮೇಲೆ ಮಲಗುತ್ತಿರುವುದು ಗಮನಕ್ಕೆ ಬಂತು.
ಉಗ್ರಾಣ ಕೋಣೆಯನ್ನು ಪರಿಶೀಲಿಸಿದ ಉಪಾಧ್ಯಕ್ಷರು, ಪಡಿತರ ಮಾಹಿತಿ ಪುಸ್ತಕ, ಸಂದರ್ಶಕ ಪುಸ್ತಕ ಮತ್ತು ಶಿಕ್ಷಕರ ಹಾಜರಾತಿ ಪುಸ್ತಕಗಳನ್ನು ತೋರಿಸುವಂತೆ ಕೇಳಿದಾಗ, ನಮ್ಮಲ್ಲಿ ಏನೂ ಇಲ್ಲ. ಎಲ್ಲವೂ ಪ್ರಾಂಶುಪಾಲರ ಹತ್ತಿರ ಇವೆ ಎಂದು ಹೇಳಿದರು.
ಸಮಸ್ಯೆ ಪರಿಹಾರದ ಭರವಸೆ: 187 ವಿದ್ಯಾರ್ಥಿನಿಯರು ಓದುತ್ತಿರುವ ಈ ಶಾಲೆಯಲ್ಲಿ ಸುರಕ್ಷತೆ ಇಲ್ಲದ್ದು ಅಸಮಧಾನಕ್ಕೆ ಕಾರಣವಾಯಿತು. ಪ್ರಾಂಶುಪಾಲರು ಮತ್ತು ವಾರ್ಡನ್ರ ವಿರುದ್ಧ ಬಾಲಕಿಯರು ದೂರು ನೀಡಿದರು. ಎಲ್ಲವನ್ನೂ ಆಲಿಸಿದ ಉಪಾಧ್ಯಕ್ಷ ದೋಖಾ, ಸಮಾಜ ಕಲ್ಯಾಣ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಮಕ್ಕಳಿಗೆ ಭರವಸೆ ನೀಡಿದರು.
ಉಗ್ರಾಣ ಕೋಣೆಗೆ ಬೀಗ: ಪಡಿತರ ಮಾಹಿತಿ ಕೊಡದ ಅಧಿಕಾರಿಗಳ ವಿರುದ್ಧ ಕುಪಿತಗೊಂಡ ಉಪಾಧ್ಯಕ್ಷರು, ಉಗ್ರಾಣ ಕೋಣೆಗೆ ಬೀಗ ಜಡಿದರು. ಪ್ರಾಂಶುಪಾಲ ಬಂದ ಮೇಲೆ ನಾವು ಬಂದು ಮತ್ತೊಮ್ಮೆ ಪರಿಶೀಲನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರು, ತಾಪಂ ಸದಸ್ಯ ಮಾರುತಿ ಮುಂಡಾಸ್, ಮಹಿಪಾಲರೆಡ್ಡಿ ದುಪ್ಪಲ್ಲಿ ಇದ್ದರು.