ಆರ್ಸೆನಿಕ್ ಯುಕ್ತ ನೀರು; ನಿರ್ಲಕ್ಷ್ಯ ಯಾಕೆ?: ಶಾಸಕ
ಕ.ಪ್ರ. ವಾರ್ತೆ , ಸುರಪುರ , ಜೂ.18
ತಾಲೂಕಿನಲ್ಲಿ ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾಗಿದ್ದರೂ ವಾಗಣಗೇರಾ, ಅಮಲಿಹಾಳ, ಕರಿಬಾವಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೇ ಉಳಿದಿದೆ. ಕಿರದಳ್ಳಿಯಲ್ಲಿ ಆರ್ಸೆನಿಕ್ಯುಕ್ತ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಪಂ ಸಭಾ ಭವನದಲ್ಲಿ ಸನ್ಮಾನ ಸ್ವೀಕರಿಸಿದ ಶಾಸಕರು, ಪ್ರಥಮ ಬಾರಿಗೆ ಸಾಮಾನ್ಯ ಸಭೆ ತೆಗೆದುಕೊಂಡು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಅವಶ್ಯಕತೆಯಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಹಾಗೂ ಅವಶ್ಯಕತೆಯಿರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸುವಂತೆ ತಿಳಿಸಿದರು.
ಸರ್ಕಾರದಿಂದ ಬಂದ ಯೋಜನೆಗಳನ್ನು ತಾಪಂ ಸದಸ್ಯರ ಗಮನಕ್ಕೆ ತರಬೇಕು. ಯಾವುದೇ ಕಾಮಗಾರಿಗಳು ಕುಂಠಿತಗೊಳ್ಳದಂತೆ ನಿಗದಿತ ಅವಧಿಯೊಳಗೆ ಮುಗಿಸಬೇಕೆಂದು ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.
ಕಿರದಳ್ಳಿಯಲ್ಲಿ 12 ನೀರಿನ ಘಟಕ: ಆಗ ಜಿಪಂ ಎಇಇ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಒಟ್ಟು 19 ಗ್ರಾಮಗಳಲ್ಲಿ ಆರ್ಸೆನಿಕ್ಯುಕ್ತ ನೀರು ಹಾಗೂ 5 ಗ್ರಾಮಗಳಲ್ಲಿ ಪ್ಲೋರೈಡ್ ಅಂಶವಿರುವ ನೀರು ಪೂರೈಕೆಯಾಗುತ್ತಿದೆ. ಕಿರದಳ್ಳಿ ತಾಂಡಾದಲ್ಲಿ ಕಳೆದ ವಾರ ನೀರಿನ ಘಟಕ ಪ್ರಾರಂಭಿಸಲಾಗಿದೆ. 12 ನೀರಿನ ಘಟಕಗಳು ಚಾಲ್ತಿಯಲ್ಲಿವೆ ಎಂದು ಸಭೆಗೆ ತಿಳಿಸಿದರು.
ಈಗಲೇ 342 ಶಿಕ್ಷಕರ ಕೊರತೆ: ತಾಲೂಕಿನಲ್ಲಿ 1,204 ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 342 ಶಿಕ್ಷಕರ ಕೊರತೆಯಿದೆ. ಈಗ ಶಿಕ್ಷಕರ ವರ್ಗಾವಣೆ ಆರಂಭವಾಗಿದೆ. ಇನ್ನಷ್ಟು ಶಿಕ್ಷಕರು ಕೊರತೆಯಾಗುವ ಸಂಭವವಿದೆ. ಆದ ಕಾರಣ ಜಿಪಂ ಅಧಿಕಾರಿಗಳಿಗೆ ವರ್ಗಾವಣೆ ತಡೆ ಹಿಡಿಯಲು ಸೂಚಿಸಬೇಕೆಂದು ಶಿಕ್ಷಣಾಧಿಕಾರಿಗಳು ಶಾಸಕರಿಗೆ ಮನವಿ ಮಾಡಿದರು.
ಡೆಂಘೀ ಮುಂಜಾಗ್ರತೆ: ತಾಲೂಕಿನಲ್ಲಿ ಕೊಡೇಕಲ್ ಹಾಗೂ ಕೋಳಿಹಾಳ ಗ್ರಾಮದಲ್ಲಿ ತಲಾ ಒಂದು ಡೆಂಘೀ ಜ್ವರ ಪ್ರಕರಣ ಪತ್ತೆಯಾಗಿದ್ದು, ಈಗ ಅವರು ಗುಣಮುಖರಾಗಿದ್ದಾರೆ. ಗ್ರಾಮದಲ್ಲಿ ಸ್ವಚ್ಛತಾ ಕ್ರಮ ಕೈಗೊಳ್ಳಲಾಗಿದೆ. 39 ಗ್ರಾಪಂ.ಗಳ ಪೈಕಿ ಕೇವಲ 8 ಫಾಗಿಂಗ್ ಮೆಷಿನ್ಗಳು ಚಾಲ್ತಿಯಲ್ಲಿವೆ. ಎಲ್ಲ ಗ್ರಾಪಂಗಳಲ್ಲಿ ಎರಡೆರೆಡು ಫಾಗಿಂಗ್ ಮೆಷಿನ್ ಅವಶ್ಯಕತೆಯಿದೆ. ತಾಲೂಕಿನಲ್ಲಿ 11 ಕುಷ್ಠರೋಗದ ಪ್ರಕರಣಗಳು ಪತ್ತೆಯಾಗಿವೆ. ಸುರಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 14 ವೈದ್ಯರ ಕೊರತೆಯಿದೆ ಎಂದು ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಹೇಳಿದರು.
ಅಧಿಕಾರಿಗಳಿಗೆ ತರಾಟೆ: ಸಭೆಯಲ್ಲಿ ಕೆಲ ಸದಸ್ಯರು ವಿವಿಧ ಇಲಾಖೆಯ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭೂಸೇನಾ ನಿಗಮದ ಅಂಗನವಾಡಿ ಕಟ್ಟಡಗಳು ಹಾಗೂ ಮೂದ್ನೂರಿನ ದೇವರ ದಾಸಿಮಯ್ಯ ಹತ್ತಿರದ ರಾಮತೀರ್ಥ, ಲಕ್ಷ್ಮಣ ತೀರ್ಥದ ನೀರು ತೆಗೆದು ಸ್ವಚ್ಛಗೊಳಿಸಲು ಭೂ ಸೇನಾ ನಿಗಮದ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯರು ಗಮನಕ್ಕೆ ತಂದರು. ಆಗ ಶಾಸಕರು, ಇನ್ಮುಂದೆ ಆ ರೀತಿ ಮಾಡದಂತೆ ಸರಿಯಾಗಿ ಹಾಗೂ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಿದರು.
ಜೆಸ್ಕಾಂ: ಕನ್ನೆಳ್ಳಿಯಲ್ಲಿ ಟಿಸಿ ಸುಟ್ಟು ತಿಂಗಳಾಯಿತು ಹಾಗೂ ಟಿಸಿ ಸುಟ್ಟರೆ ಅದು ದುರಸ್ತಿಯಾಗಿ ಬರುವವರೆಗೂ ಕತ್ತಲಲ್ಲೇ ಕಾಲ ಕಳೆಯಬೇಕು. ಕೂಡಲೇ ಸುರಪುರದಲ್ಲಿ ಟಿಸಿ ದುರಸ್ತಿ ಕೇಂದ್ರ ಸ್ಥಾಪಿಸಬೇಕೆಂದು ಸದಸ್ಯರು ಶಾಸಕರಿಗೆ ಹೇಳಿದರು. ಎಇಇ ಮುರಗೇಶ ಮಠಪತಿ ಅವರು ಇಲಾಖೆಯಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ರೇಷ್ಮೆ, ಸಿಡಿಪಿಒ ಉಳಿದ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ತಿಳಿಸಿದರು. ತಾಪಂ ಅಧ್ಯಕ್ಷೆ ಸಾಬಮ್ಮ ದೇಸಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅನ್ನಪೂರ್ಣ ಪಾಟೀಲ್, ತಹಸೀಲ್ದಾರ್ ಮಹ್ಮದ್ ಗೌಸುದ್ದೀನ್, ಇಒ ಪ್ಯಾರೆ ಮಹ್ಮದ್ ಕುತುಬುದ್ದೀನ್ ಇದ್ದರು.