ಎನ್ವಿ ಸಂಸ್ಥೆ ಇಚ್ಛಿಸಿದರೆ ವೈದ್ಯಕೀಯ ಕಾಲೇಜಿಗೆ ಪ್ರಯತ್ನ: ಸಚಿವ ಪಾಟೀಲ್
ಗುಲ್ಬರ್ಗ: ನಗರದ ನೂತನ ವಿದ್ಯಾಲಯ(ಎನ್.ವಿ) ಶಿಕ್ಷಣ ಸಂಸ್ಥೆ ಇಚ್ಛಿಸಿದರೆ ವೈದ್ಯಕೀಯ ಮಹಾವಿದ್ಯಾಲಯ ಮಂಜೂರಾತಿಗಾಗಿ ಪ್ರಯತ್ನ ಮಾಡುವುದಾಗಿ ಸಂಸ್ಥೆಯ ಹಳೇ ವಿದ್ಯಾರ್ಥಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಭರವಸೆ ನೀಡಿದರು. ನಗರದ ಸಂಗಮೇಶ್ವರ ಸಭಾಗೃಹದಲ್ಲಿ ನಡೆದ ಎನ್.ವಿ. ಸಂಸ್ಥೆಯ 107ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಸ್ಥೆ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಮಂಜೂರು ಮಾಡಿಕೊಡುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದರು. ನಾನು ಈ ಸಂಸ್ಥೆಯಲ್ಲಿ 8ರಿಂದ 10ನೇ ತರಗತಿವರೆಗೆ ಅಭ್ಯಾಸ ಮಾಡಿದ್ದೇನೆ. ಈ ಸಂಸ್ಥೆ ನನ್ನ ವ್ಯಕ್ತಿತ್ವ ರೂಪಿಸಿರುವುದರಿಂದ ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ನನ್ನ ಅಧಿಕಾರವಧಿಯಲ್ಲಿ ಈ ಸಂಸ್ಥೆಗೆ ಅಗತ್ಯದ ಸಹಾಯ ಮಾಡಲು ಇಚ್ಛಿಸಿದ್ದೇನೆ ಎಂದರು.