ಕಾಮೆಡ್-ಕೆ ಸಾಧನೆ
ಗುಲ್ಬರ್ಗ: ನಗರದ ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳು ಮೇ ತಿಂಗಳಿನಲ್ಲಿ ನಡೆದ ಕಾಮೆಡ್-ಕೆ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಶುಭಂ ಪಡಶೆಟ್ಟಿ ಮೆಡಿಕಲ್ನಲ್ಲಿ 82ನೇ ಹಾಗೂ ಎಂಜಿನಿಯರಿಂಗ್ನಲ್ಲಿ 206ನೇ, ಅಂಜಿಕ್ಯಾ ಡಿ. ಕುಲಕರ್ಣಿ ಎಂಜಿನಿಯರಿಂಗ್ನಲ್ಲಿ 111ನೇ ರ್ಯಾಂಕ್, ವಿನಯಶ್ರೀ ಆರ್. ಹರಸೂರ ಮೆಡಿಕಲ್ನಲ್ಲಿ 250ನೇ ಹಾಗೂ ಎಂಜಿನಿಯರಿಂಗ್ನಲ್ಲಿ 445ನೇ, ವೀರಸಂಗಮೇಶ ಜಿ. ಪಾಟೀಲ್ ಮೆಡಿಕಲ್ನಲ್ಲಿ 388ನೇ, ಸೌಮ್ಯ ಎಸ್. ಪಾಟೀಲ್ ಮೆಡಿಕಲ್ನಲ್ಲಿ 410 ಹಾಗೂ ಎಂಜಿನಿಯರಿಂಗ್ನಲ್ಲಿ 219ನೇ, ಅಕ್ಷತಾ ಬಿ. ಮೆಡಿಕಲ್ನಲ್ಲಿ 558ನೇ ಹಾಗೂ ಎಂಜಿನಿಯರಿಂಗ್ನಲ್ಲಿ 221ನೇ, ದೀಕ್ಷಾ ಪಾಟೀಲ್ ಮೆಡಿಕಲ್ನಲ್ಲಿ 581ನೇ ಹಾಗೂ ಎಂಜಿನಿಯರಿಂಗ್ನಲ್ಲಿ 961ನೇ, ಪ್ರತೀಕ ಜಿ. ಪಾಟೀಲ್ ಎಂಜಿನಿಯರಿಂಗ್ನಲ್ಲಿ 60ನೇ ರ್ಯಾಂಕ್ ಪಡೆದಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಸಾಧನೆ
ಗುಲ್ಬರ್ಗ: ಕಳೆದ ಮೇ ತಿಂಗಳಲ್ಲಿ ನಡೆದ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ನಗರದ ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಪಡೆದುಕೊಂಡಿದ್ದಾರೆ. ದರ್ಶನ ಆರ್.ಎಂ.(ಎಸ್ಸಿ)- 48ನೇ ರ್ಯಾಂಕ್, ಕಾವ್ಯ ಮಲಕಪ್ಪ(ಎಸ್ಟಿ) 107ನೇ ರ್ಯಾಂಕ್, ಪಾಯಲ್ ಜೆ. ಮಂತ್ರಿ(ಒಬಿಸಿ) 785ನೇ ರ್ಯಾಂಕ್, ಮಹಾಲಕ್ಷ್ಮೀ ಎಸ್. ಕೋರವಾಲ(ಎಸ್ಸಿ) 848ನೇ ರ್ಯಾಂಕ್, ಅಕ್ಷತಾ ಬಿ.(ಒಬಿಸಿ) 1241ನೇ ರ್ಯಾಂಕ್, ಸುಮಿತ್ರಾ ಸಾನವಿ(ಎಸ್ಸಿ) 1383ನೇ ರ್ಯಾಂಕ್, ಮೆಹಿತ ಕಲ್ಯಾಣಕರ್1630ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಶರಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸಪ್ಪ ಅಪ್ಪ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಸೇಡಂ ಪ್ರೆಸ್ಕ್ಲಬ್ ಅಧ್ಯಕ್ಷರಾಗಿ ಮುನೀಬ್ ಆಯ್ಕೆ
ಸೇಡಂ: ಇಲ್ಲಿನ ಪ್ರೆಸ್ಕ್ಲಬ್ನ ಅಧ್ಯಕ್ಷರಾಗಿ ಮಹ್ಮದ್ ಮುನೀಬ್ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಅಂದಿನ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ರೇಲ್ವೆ ಖಾತೆ ರಾಜ್ಯ ಸಚಿವ ಮುನಿಯಪ್ಪ ಅವರಿಂದ ಉದ್ಘಾಟನೆಗೊಂಡಿದ್ದ ಈ ಪ್ರೆಸ್ಕ್ಲಬ್ನ ಮೊದಲ ಅವಧಿಗೆ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ, ಎರಡನೇ ಅವಧಿಗೆ ಜಗನ್ನಾಥ ತರನಳ್ಳಿ ಕಾರ್ಯನಿರ್ವಹಿಸಿದ್ದರು. ಮೂರನೇ ಅವಧಿಗೆ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಮಹ್ಮದ್ ಮುನೀಬ್ ಆಯ್ಕೆಯಾಗಿದ್ದಾರೆ. ಉಳಿದ ಪದಾಧಿಕಾರಿಗಳನ್ನು ಆಯ್ಕೆಮಾಡುವ ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ನೀಡಲಾಗಿದೆ.
ಕಚೇರಿ ತಾತ್ಕಾಲಿಕ ಸ್ಥಳಾಂತರ: ಖಾಸಗಿ ಸ್ಥಳದಲ್ಲಿ ಆರಂಭಿಸಲಾಗಿದ್ದ ಪ್ರೆಸ್ಕ್ಲಬ್ನ್ನು ತಾತ್ಕಾಲಿಕವಾಗಿ ಪುರಸಭೆ ಸಂಕೀರ್ಣದ ಅಪ್ಪಾಜಿ ಡಿಸೈನ್ಗೆ ಸ್ಥಳಾಂತರಿಸಲಾಗಿದೆ. ಕೆಲವೇ ದಿನಗಳಲ್ಲಿ ಪುರಸಭೆ ಕಚೇರಿ ಎದುರುಗಡೆ ಕ್ಲಬ್ನ ಸ್ವಂತ ಕಾರ್ಯಾಲಯವನ್ನು ತೆರೆಯಲಾಗುವುದು ಎಂದು ಪ್ರೆಸ್ಕ್ಲಬ್ನ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮಹಾಗಾಂವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ರಸ್ತೆ, ಹೆದ್ದಾರಿ ಸಚಿವರ ಪ್ರವಾಸ
ಗುಲ್ಬರ್ಗ: ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಜೂ.18ರಂದು ರಾತ್ರಿ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದು, ಜೂ.19ರಂದು ಮಧ್ಯಾಹ್ನ 3 ಗಂಟೆಯವರೆಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ 3 ಗಂಟೆಗೆ ರಸ್ತೆ ಮತ್ತು ಹೆದ್ದಾರಿಗಳ ಕಚೇರಿಯ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ರಸ್ತೆ ಮೂಲಕ ಹೈದ್ರಾಬಾದಿಗೆ ತೆರಳುವರು.
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ; ನಿಷೇಧಾಜ್ಞೆ
ಗುಲ್ಬರ್ಗ: ಜಿಲ್ಲಾದ್ಯಂತ ಜೂ.17ರಿಂದ 24ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ಜರುಗಲಿವೆ. ಪರೀಕ್ಷೆಗಳು ಸುಸೂತ್ರವಾಗಿ ಜರುಗಿಸುವ ದೃಷ್ಟಿಯಿಂದ 1973ರ ಸಿಆರ್ಪಿಸಿ ಕಲಂ 144ರಡಿ ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಅಂತರದಲ್ಲಿ ಪರೀಕ್ಷೆಗಳಿಗೆ ತೊಂದರೆಯಾಗುವ ಯಾವುದೇ ಕಾರ್ಯಚಟುವಟಿಕೆ ನಡೆಸದಂತೆ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ.
ಸಾಲದ ಮೇಲಿನ ಬಡ್ಡಿ ಮನ್ನಾ
ಗುಲ್ಬರ್ಗ: ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮತ್ತು ಕರ್ನಾಟಕ ಪರಿಶಿಷ್ಠ ಪಂಗಡ ಅಭಿವೃದ್ಧಿ ನಿಗಮಗಳಿಂದ ಮಂಜೂರು ಮಾಡಿದ ಸಾಲಗಳು ಪ್ರಾರಂಭದಿಂದ 13 ಮೇ 2013ರವರೆಗೆ ಪಾವತಿಯಾಗದೆ ಬಾಕಿ ಇರುವ ಎಲ್ಲ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.