ಚಿಂಚೋಳಿಯಲ್ಲಿ ರಸ್ತೆ ತಡೆ
ಚಿಂಚೋಳಿ: ಪೆಟ್ರೋಲ್ ಮತ್ತು ಬಸ್ ದರ ಏರಿಕೆಯನ್ನು ವಿರೋಧಿಸಿ ಮತ್ತು ಖಾಸಗೀಕರಣ ಅನುಕೂಲ ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ಖಂಡಿಸಿ ಹಾಗೂ ಏರಿಕೆ ದರಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಭಾರತ ಕಮ್ಯೂನಿಷ್ಟ್(ಮಾಕ್ಸವಾದಿ) ಸಿಪಿಐ(ಎಂ) ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ರಸ್ತೆ ತಡೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಾರ್ಯಕರ್ತ ಶರಣಬಸಪ್ಪ ಮಮಶೆಟ್ಟಿ ಮಾತನಾಡಿದರು. ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ, ಪ್ರದೀಪ ತಿರಲಾಪುರ, ಸಿದ್ದು ಹಲಚೇರಿ, ಹಣಮಂತರೆಡ್ಡಿ ಕೊಳ್ಳೂರ, ಸಿದ್ದಾರ್ಥ ಠಾಕೂರ ಇತರರು ರಸ್ತೆ ತಡೆ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಕಚೇರಿ ಶಿರಸ್ತೆದಾರ ರವೀಂದ್ರ ದಾಮಾ ಮನವಿ ಪತ್ರ ಸ್ವೀಕರಿಸಿ, ಬೇಡಿಕೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ರಸ್ತೆ ತಡೆಯಿಂದಾಗಿ ಚಿಂಚೋಳಿ- ತಾಂಡೂರು, ಗುಲ್ಬರ್ಗ, ಸೇಡಂ ಮಾರ್ಗಕ್ಕೆ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.