ಜಿಪಂ 'ಸಾಮಾಜಿಕ ನ್ಯಾಯ'ದಾನ ವಿಳಂಬ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಜೂ.18
ಸಾಮಾನ್ಯ ಸಭೆಗಳನ್ನು ನಡೆಸಲಾಗದೆ ಈಗಾಗಲೇ ಜನಮಾನಸದಲ್ಲಿ ಸುದ್ದಿಯಲ್ಲಿರುವ ಇಲ್ಲಿನ ಜಿಲ್ಲಾ ಪಂಚಾಯ್ತಿಯಲ್ಲಿ ಸ್ಥಾಯಿ ಸಮಿತಿ ಸಭೆಗಳಿಗೂ ಬರಗಾಲ ಅಮರಿಕೊಂಡಿದೆ. ಏಕೆಂದರೆ ಇಲ್ಲಿನ ಜಿಲ್ಲಾ ಪಂಚಾಯ್ತಿಯ ಅತ್ಯಂತ ಮಹತ್ವದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ರಚನೆಯಾಗಿ ನಡೆಸಿರುವ 1 ಸಭೆ ಹೊರತುಪಡಿಸಿದರೆ ಇಂದಿಗೂ ಮತ್ತೊಮ್ಮೆ ಸಭೆ ಸೇರಿಲ್ಲ.
ಹೀಗಾಗಿ ಜಿಲ್ಲಾದ್ಯಂತ ಇರುವ ಈ ಸಮಿತಿಯಡಿಯಲ್ಲಿಯೇ ಬರುವ ಅನೇಕ ವಿಚಾರಗಳು ಗರಬಡಿದಂತೆ ಹಾಗೇ ಕುಳಿತಿದ್ದು ತೊಂದರೆಗಳು ಹೆಚ್ಚುತ್ತಿವೆ. ಈ ಸ್ಥಾಯಿ ಸಮಿತಿಯ ಅಡಿಯಲ್ಲಿ ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಯ ಅನೇಕ ಸಂಗತಿಗಳು ಬರುತ್ತವೆ.
ಇದಲ್ಲದೆ ಇವೆಲ್ಲ ಇಲಾಖೆಗಳಿಗೆ ಸಂಬಂಧಪಡುವ ಇತರೆ ಇಲಾಖೆಗಳ ಬಗ್ಗೆಯೂ ಈ ಸ್ಥಾಯಿ ಸಮಿತಿ ತನ್ನ ಮೇಲ್ವಿಚಾರಣೆ ಮಾಡಬಹುದಾಗಿದೆ. ಕೆಲಸಗಳು ವಿಳಂಬವಾದಲ್ಲಿ ಸಂಬಂಧಪಟ್ಟಂತಹವರಿಗೆ ಕರೆದು ನಿಗಾ ಇಡುವ ಕೆಲಸವೂ ಈ ಸ್ಥಾಯಿ ಸಮಿತಿಯದ್ದಾಗಿದೆ.
ಆದರೇನು ಮಾಡುವುದು ಇಂತಹ ಮಹತ್ವದ ಅಧಿಕಾರವಿರುವ ಸ್ಥಾಯಿ ಸಮಿತಿ ಇಂದಿಗೂ ಸಭೆ ನಡೆಸುವಲ್ಲೇ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿರುವ ಶೋಷಿತ ವರ್ಗ, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ್ಗಗಳ ಜನತೆಗೆ ಸರ್ಕಾರದ ಕಲ್ಯಾಣ ಯೋಜನೆಗಳ ಫಲ ದಕ್ಕುವಲ್ಲಿ ಸಹಜವಾಗಿಯೇ ವಿಳಂಬವಾಗುತ್ತಿದೆ.
ಗಂಡಂದಿರದ್ದೇ ಪ್ರಾಬಲ್ಯ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಲ್ಲಿರುವ 7 ಸದಸ್ಯರಲ್ಲಿ ಅಧ್ಯಕ್ಷರಾದಿಯಾಗಿ 6 ಮಂದಿ ಮಹಿಳೆಯರೇ ಇರುವುದು ಗಮನಾರ್ಹ. ಹೀಗಾಗಿ ಮಹಿಳೆಯರು ಈ ಮಹತ್ವದ ಸಮಿತಿಯಲ್ಲಿ ಏನು ಮಾತನಾಡಿದರೆ ಏನೆಲ್ಲಾ ತೊಂದರೆಗಳೋ ಎಂದು ಹೆದರಿ ಎಲ್ಲದಕ್ಕೂ ತಮ್ಮ ಪತಿರಾಯರ ನೆರವನ್ನೇ ಬಯಸುತ್ತಿರುವುದರಿಂದಲೂ ಸ್ಥಾಯಿ ಸಮಿತಿ ಕ್ರಿಯಾಶೀಲವಾಗದೆ ತೆವಳುತ್ತ ಸಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆಹಾರ ಧಾನ್ಯ ಟೆಂಡರ್ ಆಗಿಲ್ಲ: ಜಿಲ್ಲೆಯ 12 ಸಾವಿರಕ್ಕೂ ಅಧಿಕ ಮಕ್ಕಳು ವಾಸವಿರುವ ಬಿಸಿಎಂ, ಸಮಾಜ ಕಲ್ಯಾಣ ವಸತಿ ನಿಲಯಗಳಿಗೆ ಆಹಾರ ಧಾನ್ಯ ಪೂರೈಸಲು ಇಂದಿಗೂ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಹಳೆಯ ವಿಧಾನವನ್ನೇ ಮುಂದುವರಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಟೆಂಡರ್ ಆಗುವಲ್ಲಿನ ವಿಳಂಬ ಇಲ್ಲಿ ಅನೇಕ ಗೊಂದಲಗಳನ್ನು ಸೃಷ್ಟಿಸಿದೆ. ಅಧಿಕಾರಿಗಳು ತಮ್ಮ ಹಂತದಲ್ಲೇ ಆಹಾರ ಧಾನ್ಯ ಖರೀದಿಗೆ ಮುಂದಾಗಿದ್ದರಿಂದ ಗುಣಮಟ್ಟದ ಧಾನ್ಯಗಳು ವಸತಿ ನಿಲಯಕ್ಕೆ ಸರಬರಾಜಾಗುತ್ತಿಲ್ಲ.