ಬಸ್ ಪ್ರಯಾಣ ದರ ಏರಿಕೆ; ಪ್ರತಿಭಟನೆ
ಗುಲ್ಬರ್ಗ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದ ಜನತೆಯ ಮೇಲೆ ಕರ್ನಾಟಕ ರಾಜ್ಯ ಸರ್ಕಾರವು ಭಾರೀ ಪ್ರಮಾಣದಲ್ಲಿ ಬಸ್ ಪ್ರಯಾಣ ದರ ಏರಿಸಿ ಬರೆ ಎಳೆದಿರುವುದನ್ನು ಖಂಡಿಸಿ ಎಸ್‌ಯುಸಿಐ(ಕಮ್ಯೂನಿಸ್ಟ್)ದ ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀಮಂತ ಕಾರ್ಪೋರೇಟ್ ಉದ್ಯಮಿಗಳಿಗೆ ಕೋಟ್ಯಂತರ ರು.ಗಳ ರಿಯಾಯಿತಿಯನ್ನು ನೀಡುವ ಸರ್ಕಾರಗಳು ಜನಸಾಮಾನ್ಯರ ಹೆಗಲಿಗೆ ಎಲ್ಲಾ ಭಾರವನ್ನು ವರ್ಗಾಯಿಸುವುದು ಅತ್ಯಂತ ಖಂಡನಾರ್ಹ ಎಂದರು.
ಸರ್ಕಾರದ ಈ ಧೋರಣೆಯ ವಿರುದ್ಧ ಎಲ್ಲ ಜನಸಾಮಾನ್ಯರು ಒಂದುಗೂಡಿ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಬಲಿಷ್ಠ ಹೋರಾಟ ರೂಪಿಸಲು ಮುಂದೆ ಬರಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಎಚ್.ವ್ಹಿ. ದಿವಾಕರ್ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಮಿತಿಯ ಹಲವಾರು ಮುಖಂಡರು, ಕಾರ್ಯಕರ್ತರು, ನಾಗರಿಕರು ಭಾಗವಹಿಸಿದ್ದರು.