ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಯಾದಗಿರಿ: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ರಾಜ್ಯ ಸರ್ಕಾರ ಬಸ್ಸಿನ ದರ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಕೇಂದ್ರದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಮಾನ್ಯರ ಸಮಸ್ಯೆ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಸಮರ್ಥ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳದ ಕಾರಣ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.
ಬಸ್‌ದರ ಏರಿಕೆ ಬರೆ: ಹಾಗೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ದಿಕ್ಕುದೆಸೆಯಿಲ್ಲದ ಯೋಜನೆ ಘೋಷಿಸುತ್ತಾ ಜನತೆಗೆ ಮರಳು ಮಾಡಲು ಯತ್ನಿಸುತ್ತಿದೆ. ಡೀಸೆಲ್ ಬೆಲೆ ಏರಿಸಿದ ಹಿನ್ನೆಲೆಯಲ್ಲಿ ಬಸ್ಸಿನ ದರವನ್ನು ಹೆಚ್ಚಳ ಮಾಡಿ ಸಾಮಾನ್ಯರ ಮೇಲೆ ಬರೆ ಎಳೆದಿದೆ. ಖಾಸಗಿ ಕ್ಷೇತ್ರದವರು ಬಸ್ಸಿನ ಬೆಲೆ ಹೆಚ್ಚಳದ ಬಗ್ಗೆ ತಮ್ಮ ನಿಲುವನ್ನು ಪ್ರಕಟಿಸುವ ಮುನ್ನವೇ ಸರ್ಕಾರ ಹೆಚ್ಚಳ ಮಾಡಿ ಖಾಸಗಿಯವರಿಗೆ ಪರೋಕ್ಷವಾಗಿ ಬೆಂಬಲಿಸಿದಂತಾಗಿದೆಂದು ಆರೋಪಿಸಿತು.
ರಾಜ್ಯದ ಎಲ್ಲ ವರ್ಗದ ಬಡ ಕುಟುಂಬಗಳಿಗೆ 30 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದ ಸರ್ಕಾರ, ಎಪಿಎಲ್ ಕಾರ್ಡುದಾರರಿಗೆ ಅಕ್ಕಿಯನ್ನು ಕೊಡುವುದಿಲ್ಲ ಎಂದು ವಿಶ್ವಾಸಕ್ಕೆ ಬಗೆದ ದ್ರೋಹವಾಗಿದೆ. ಬಿಜೆಪಿ ಘೋಷಣೆ ಮಾಡಿದ ನೂತನ ತಾಲೂಕುಗಳನ್ನು ರಚಸಿ ಸೂಕ್ತ ಅಭಿವೃದ್ಧಿಗೆ ಮುಂದಾಗಲು ಒತ್ತಾಯಿಸಿದರು. ವೀರಣ್ಣ ಮಲ್ಲಾಬಾದಿ, ಬಸವರಾಜ, ನೀಲಕಂಠರಾಯ, ಚಂದ್ರ, ದೇವಿಂದ್ರನಾಥ, ಗೋಪಾಲ, ಲಿಂಗಪ್ಪ, ವೆಂಕಟರೆಡ್ಡಿ, ಕಾರ್ಯಕರ್ತರಿದ್ದರು.