16 ಜನರ ಲೆಕ್ಕ ಇನ್ನೂ ಬಾಕಿ
ಯಾದಗಿರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹರಿಸಿದ ಹಣಕ್ಕೆ ಲೆಕ್ಕವಿಲ್ಲ. ಆದರೆ ಚುನಾವಣಾ ಆಯೋಗಕ್ಕೆ ಮಾತ್ರ ಇವರು ಪಕ್ಕಾ ಲೆಕ್ಕ ಕೊಟ್ಟಿದ್ದಾರೆ. ಆರೇಳು ಲಕ್ಷಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೆಲ್ಲ ಚುನಾವಣೆ ಮಾಡಿ ಮುಗಿಸಿದ್ದಾರೆ ಎಂಬ ಲೆಕ್ಕ ಈಗ ಗೊತ್ತಾಗಿದೆ. ಚುನಾವಣೆಯಲ್ಲಿ ಮಾಡಿದ ಖರ್ಚು ವೆಚ್ಚಗಳನ್ನು ಕಳೆದ ಜೂ. 7ರೊಳಗೆ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿತ್ತು. ಅದರಂತೆ ಜಿಲ್ಲೆಯ 4 ವಿಧಾನಸಬಾ ಕ್ಷೇತ್ರಗಳಿಗೆ ಸ್ಪಧಿಸಿದ್ದ 47 ಜನರ ಪೈಕಿ 31 ಜನರು ಲೆಕ್ಕ ನೀಡಿದ್ದು, ಉಳಿದ 16 ಜನರು ಇನ್ನೂ ಆಯೋಗಕ್ಕೆ ಲೆಕ್ಕ ಕೊಟ್ಟಿಲ್ಲ.
ಮಿತಿಯ ಅರ್ಧದಷ್ಟೂ ಖರ್ಚು ಮಾಡಿಲ್ವಂತೆ!: ಒಬ್ಬ ಅಭ್ಯರ್ಥಿ ಗರಿಷ್ಠ 16 ಲಕ್ಷವರೆಗೆ ಖರ್ಚು ಮಾಡಬಹುದು ಎಂದು ಆಯೋಗ ತಿಳಿಸಿತ್ತು. ಆದರೆ ಅವರು ಆಯೋಗಕ್ಕೆ ಕೊಟ್ಟ ಲೆಕ್ಕದ ಪ್ರಕಾರ ಜಿಲ್ಲೆಯ ಯಾವೊಬ್ಬ ಅಭ್ಯರ್ಥಿಯೂ ಈ ಗಡಿಯನ್ನು ದಾಟಿಲ್ಲ. ಅದರ ಅರ್ಧದಷ್ಟು ಖರ್ಚನ್ನೂ ಮಾಡದೇ ಚುನಾವಣೆ ಮಾಡಿ ಮುಗಿಸಿದ್ದಾರೆ!
ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ 7,50,422 ಖರ್ಚು ಮಾಡುವ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚು ಖರ್ಚು ಮಾಡಿದವರ ಪೈಕಿ ಮೊದಲಿಗರಾಗಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಭೀಮಪ್ಪ ಚಂದಪ್ಪ ಅತ್ಯಂತ ಕಡಿಮೆ 11,600 ಖರ್ಚು ಮಾಡಿದ್ದಾರೆ.
ಸುರಪುರ ಕ್ಷೇತ್ರ: ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ 6,32,299, ಬಿಜೆಪಿಯ ಮದನಗೋಪಾಲ ನಾಯಕ 6,42,955, ಜೆಡಿಎಸ್‌ನ ರಾಜುಗೌಡ 6,22,151 ಖರ್ಚು ಮಾಡಿರುವುದಾಗಿ ಲೆಕ್ಕ ಕೊಟ್ಟಿದ್ದಾರೆ. ಬಸವರಾಜ ಯಮನಪ್ಪ 34,700, ರಾಮನಗೌಡ 1,51,593, ರಾಮಲಿಂಗಪ್ಪ 41,720 ಖರ್ಚು ಮಾಡಿದ್ದಾರೆ. 10 ಜನರ ಪೈಕಿ 6 ಜನ ಮಾತ್ರ ಆಯೋಗಕ್ಕೆ ಲೆಕ್ಕ ಕೊಟ್ಟಿದ್ದಾರೆ.
ಶಹಾಪುರ ಕ್ಷೇತ್ರ: ಕೆಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ 6,64,852, ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪುರ 5,67,196, ಬಿಎಸ್ಸಾರ್ ಕಾಂಗ್ರೆಸ್‌ನ ಶಂಕ್ರಣ್ಣ ವಣಿಕ್ಯಾಳ 2,99,887, ಜೆಡಿಎಸ್‌ನ ಶರಣಪ್ಪ ಸಲಾದಪುರ 2,93,308, ಬಿಜೆಪಿಯ ವೀರಣ್ಣಗೌಡ ಮಲ್ಲಾಬಾದಿ 2,68,054, ಪಕ್ಷೇತರರಾದ ಅಪ್ಪಾಸಾಹೇಬ 57,670, ಅಮರಣ್ಣ 1,06,440, ಭೀಮಪ್ಪ ಚಂದಪ್ಪ 11,620 ಹಾಗೂ ಬಸವರಾಜ ಪಡುಕೋಟೆ 1,31,722 ಖರ್ಚು ಮಾಡಿದ ಲೆಕ್ಕ ಒದಗಿಸಿದ್ದಾರೆ.
ಯಾದಗಿರಿ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಡಾ. ಎ.ಬಿ.ಮಾಲಕರೆಡ್ಡಿ 4,91,127, ಕೆಜೆಪಿಯ ಡಾ. ವೀರಬಸವಂತರೆಡ್ಡಿ ಮುದ್ನಾಳ 4,31,484, ಬಿಜೆಪಿಯ ಚಂದ್ರಶೇಖರ ಮಾಗನೂರ 3,52,269, ಬಿಎಸ್ಸಾರ್ ಕಾಂಗ್ರೆಸ್‌ನ ಮೌಲಾಲಿ ಅನಪುರ 3,82,337, ಜೆಡಿಎಸ್‌ನ ಎ.ಸಿ. ಕಾಡ್ಲೂರ 2,69,442 ಖರ್ಚು ಮಾಡಿರುವ ಲೆಕ್ಕ ಕೊಟ್ಟಿದ್ದಾರೆ. ಜಲಂಧರರಾವ ಮುಂಡರಗಿ 14,482, ಸಿದ್ದರಾಮಪ್ಪ 86,100, ಬಸವರಾಜ 58,563 ಖರ್ಚು ಮಾಡಿರುವ ಲೆಕ್ಕ ಕೊಟ್ಟಿದ್ದು, 10 ಜನರ ಪೈಕಿ ಇನ್ನೂ ಇಬ್ಬರು ಲೆಕ್ಕ ಕೊಡುವುದು ಬಾಕಿಯಿದೆ.
ಗುರುಮಠಕಲ್ ಕ್ಷೇತ್ರ: ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ 7,50,422, ಕೆಜೆಪಿಯ ವೆಂಕಟರೆಡ್ಡಿ ಮುದ್ನಾಳ 5,13,153, ಜೆಡಿಎಸ್‌ನ ನಾಗನಗೌಡ ಕಂದಕೂರ 3,55,735, ಬಿಜೆಪಿಯ ಗಿರೀಶ ಮಟ್ಟಣ್ಣವರ 3,69,953, ಶೇಖ್ ಮಹಿಬೂಬ್ 2,22,565, ಅನಿಲಕುಮಾರ 98,382, ಪಿ.ಕನ್ನಯ್ಯ 62,790, ಮಲ್ಲಿಕಾರ್ಜುನ ಕಟ್ಟಿಮನಿ 1,00,570 ಖರ್ಚಿನ ಲೆಕ್ಕ ಕೊಟ್ಟಿದ್ದಾರೆ. ಕ್ಷೇತ್ರದಿಂದ 17 ಜನರು ಸ್ಪರ್ಧಿಸಿದ್ದು, ಇನ್ನೂ 9 ಜನರು ಆಯೋಗಕ್ಕೆ ಲೆಕ್ಕ ಕೊಟ್ಟಿಲ್ಲ.