ಈ ವಿದ್ಯಾರ್ಥಿಗಳನ್ನು ದೇವರೇ ಕಾಪಾಡಬೇಕು
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.19
ಒಂದು ಕಡೆ ನಿಮಿಷಕ್ಕೊಮ್ಮೆ ಗಂಟೆಯ ಸದ್ದು. ಪಕ್ಕದಲ್ಲೇ ಕಡೆ ಪುಟಾಣಿ ಮಕ್ಕಳ ಬಾಯಿಂದ ಅಆಇಈ... ಕಂಠಪಾಠ. ಇವೆರಡೂ ದೇವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿ ನಿರಂತರವಾಗಿ ನಡೆದೇ ಇದೆ.
ಹಾಗಂತ ಇದೇನು ಮಂತ್ರ ಕಲಿಸುವ ಪಾಠಶಾಲೆಯಲ್ಲ. ಕಳೆದ 7 ವರ್ಷಗಳಿಂದ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರ ಕತೆ. ನಗರದ ವಾಲ್ಮೀಕಿ ಬಡಾವಣೆಯಲ್ಲಿರುವ ಮಶೆಮ್ಮ ಗುಡಿಯಲ್ಲಿ ಹೀಗೊಂದು ಸರ್ಕಾರಿ ಶಾಲೆ ಮೂಲಭೂತ ಸೌಲಭ್ಯಗಳಿಲ್ಲದೇ ನರಳುತ್ತಿದೆ. ಇಲ್ಲಿ 1ರಿಂದ 5ನೇ ತರಗತಿವರೆಗೆ 54 ಮಕ್ಕಳು ಓದುತ್ತಿದ್ದು, ದೇವಸ್ಥಾನದ ಗರ್ಭಗುಡಿ ಸುತ್ತುವ ಕಿರಿದಾದ ಸ್ಥಳದಲ್ಲೇ 1-3ನೇ ತರಗತಿಯ ಮಕ್ಕಳ ನಲಿಕಲಿ ನಡೆಯುತ್ತಿದೆ. ದೇವಸ್ಥಾನಕ್ಕೆ ಆಗಾಗ ಬರುವ ಭಕ್ತರು ಗಂಟೆ ಶಬ್ಧ ಮೊಳಗಿಸಿ ಮಕ್ಕಳನ್ನು ಸರಿಸಿಕೊಂಡು ಸುತ್ತುತ್ತಿರುತ್ತಾರೆ.
4 ಮತ್ತು 5ನೇ ತರಗತಿ ಮಕ್ಕಳು ದೇವಸ್ಥಾನಕ್ಕೆ ಸೇರಿದ ಗೋಡನ್ನ ಕತ್ತಲೆ ಕೋಣೆಯಲ್ಲಿ ಪಾಠ ಕೇಳುತ್ತಾರೆ. ಜಿಲ್ಲಾ ಕೇಂದ್ರದಲ್ಲೇ ಇಂಥದ್ದೊಂದು ಸರ್ಕಾರಿ ಶಾಲೆ ನಡೆಯುತ್ತಿದೆ ಎಂದರೆ ಆಶ್ಚರ್ಯವಾಗಬಹುದು.
ಕಾರ್ಯಕ್ರಮವಿದ್ದರೆ ಹೊರಗೆ: ವಾಲ್ಮೀಕಿ ಬಡಾವಣೆಯ ಬಡ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಮಶೆಮ್ಮ ದೇವಿ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಮವಾಸ್ಯೆ ಹಾಗೂ ಹುಣ್ಣಿಮೆಯಂದು ಬೆಳಗ್ಗೆಯಿಂದ ಸಂಜೆವರೆಗೂ ಸಾರ್ವಜನಿಕರು ಬರುತ್ತಲೇ ಇರುತ್ತಾರೆ. ಅಲ್ಲದೇ ವಿಶೇಷ ಪೂಜೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮವಿದ್ದಾಗ ಅಕ್ಕಪಕ್ಕದ ಖಾಲಿ ಜಾಗಕ್ಕೆ ಶಾಲೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ಸಾಮಾನ್ಯ ದಿನಗಳಂದೂ ಇಲ್ಲಿ ತರಗತಿ ನಡೆಸುವುದು ಬಹಳ ಕಷ್ಟ. ಇಬ್ಬರು ಶಿಕ್ಷಕಿಯರಿದ್ದು, ಕಳೆದ 7 ವರ್ಷಗಳಿಂದ ಗಂಟೆ ಹಾಗೂ ಇತರ ಸದ್ದುಗದ್ದಲಗಳ ಮಧ್ಯೆಯೇ ಪಾಠ ಮಾಡುತ್ತಿದ್ದಾರೆ. ಆದರೆ ಇದುವರೆಗೆ ಈ ಶಾಲೆಗೊಂಡು ಸ್ವಂತ ಕಟ್ಟಡ ನೀಡುವ ಬಗ್ಗೆ ಇಲಾಖೆ ಅಧಿಕಾರಿಗಳು ಗಮನ ನೀಡಿಲ್ಲ. ಶಾಲೆಯು ಈ ಭಾಗದ ಶೈಕ್ಷಣಿಕ ಗುಣಮಟ್ಟವನ್ನು ಎತ್ತಿ ತೋರಿಸುತ್ತಿದೆ.
ನಿತ್ಯವೂ ನಲಿಕಲಿ: ಶಾಲೆಯೆಂದರೆ ಅಲ್ಲಿ ಟೇಬಲ್, ಕುರ್ಚಿ, ಕಪ್ಪು ಹಲಗೆ, ಚಿತ್ರಪಟಗಳು ಕಾಣಬೇಕು. ಆದರೆ ಇಲ್ಲಿ ಮಾತ್ರ ಶಾಲೆಯ ವಾತಾವರಣವೇ ಇಲ್ಲ. ಸಣ್ಣ ಮಕ್ಕಳಿಗೆ ಅಆಇಈ ಹಾಕಿಕೊಡಲೂ ಇಲ್ಲೊಂದು ಬ್ಲಾಕ್ ಬೋರ್ಡ್ ಇಲ್ಲ. ಆದ್ದರಿಂದ 1ರಿಂದ 3ನೇ ತರಗತಿ ಮಕ್ಕಳಿಗೆ ನಿತ್ಯವೂ ಇಲ್ಲಿ ನಿತ್ಯವೂ ನಲಿಕಲಿ. ಆದರೆ ನಲಿಕಲಿ ಸಾಮಗ್ರಿಗಳು ಇಲ್ಲ. ಶಿಕ್ಷಕರು ಕುಳಿತುಕೊಳ್ಳಲು ಕುರ್ಚಿಯಿಲ್ಲ. ಬೇಕಿದ್ದರೆ ಅಲ್ಲೇ ಇರುವ ಕಟ್ಟೆ ಮೇಲೆ ಏರಿ ಕುಳಿತುಕೊಳ್ಳಬೇಕು. ಮಕ್ಕಳು ನೆಲದ ಮೇಲೆ ಕುಳಿತೇ ಪಾಠ ಕೇಳಬೇಕು.
ದೇವಸ್ಥಾನ ಸುತ್ತುವ ಭಕ್ತರಿಗೆ ಆಗಾಗ ದಾರಿ ಕೊಡಬೇಕು. ಇನ್ನು 4 ಮತ್ತು 5ನೇ ತರಗತಿ ಕೋಣೆ ಗೋಡನ್ ಇದ್ದಂತೆ. ಅಲ್ಲಿ ಅಕ್ಕಪಕ್ಕದ ಮನೆಯವರು ಸಂಗ್ರಹಿಸಿರುವ ಜೋಳದ ಸೊಪ್ಪು, ಹುಲ್ಲು, ಶೇಂಗಾ ಸೊಪ್ಪು ಇತ್ಯಾದಿ ಅಲ್ಲಿ ದಾಸ್ತಾನಿಡಲಾಗಿದೆ. ಸಾರ್ವಜನಿಕರು ಪಾಠ ನಡೆಯುತ್ತಿರುವಾಗ ಅವರ ಪಾಡಿಗೆ ಬಂದು ಹೋಗುತ್ತಿರುತ್ತಾರೆ.
ಪುಂಡರ ಕಾಟ: ಇನ್ನೊಂದು ಕಳವಳಕಾರಿ ಸಂಗತಿ ಎಂದರೆ ಮಶೆಮ್ಮ ದೇವಸ್ಥಾನದ ಆವರಣದಲ್ಲಿ ಪುಂಡರ ಕಾಟ ಹೆಚ್ಚಾಗಿದೆ. ಇತ್ತ ತರಗತಿ ನಡೆಯುತ್ತಿದ್ದರೆ, ಹೊರ ಆವರಣದಲ್ಲಿ ಪೋಕರಿಗಳು ಇಸ್ಪೀಟು ಆಡುತ್ತಿರುತ್ತಾರೆ. ತರಗತಿಗಳು ನಡೆವ ವೇಳೆಯಲ್ಲಿ ದೇವಸ್ಥಾನದಲ್ಲಿನ ಟಿವಿಯನ್ನೂ ಜೋರಾಗಿ ಹಚ್ಚಲಾಗುತ್ತದೆ. ಶಿಕ್ಷಕರು ಕೇಳಿದರೆ, ಇದು ನಮ್ಮ ಜಾಗ, ನಿಮ್ಮ ಕೆಲಸ ಏನಿದೆಯೋ ಅದನ್ನಷ್ಟೇ ಮಾಡಿ. ನಮಗೆ ಬುದ್ಧಿ ಹೇಳಬೇಡಿ ಎನ್ನುವ ಬೆದರಿಕೆ ಮಾತುಗಳೂ ಕೇಳಿ ಬರುತ್ತವೆ. ಇದರಿಂದ ಶಿಕ್ಷಕರಿಗೆ ಶಾಲೆ ನಡೆಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹುಡುಕಾಟದಲ್ಲೇ ಕಾಲ ಕಳೆದರು: ಕಳೆದ ಏಳು ವರ್ಷಗಳಿಂದ ಶಾಲೆ ಇದೇ ದೇವಸ್ಥಾನದಲ್ಲಿ ನಡೆಯುತ್ತಿದ್ದರೂ, ಇಲಾಖೆ ಅಧಿಕಾರಿಗಳು ಇನ್ನೂ ನಿವೇಶನ ಹುಡುಕಾಟದಲ್ಲೇ ಇದ್ದಾರೆ. ಈ ಬಗ್ಗೆ ಬಿಇಒ ಮಜರ್ ಹುಸೇನ್ ಅವರನ್ನು ಕೇಳಿದಾಗ, ಬಡಾವಣೆಯ ದಂಡಗುಂಡ ಬಸವಣ್ಣ ದೇವಸ್ಥಾನದ ಸಮೀಪ ಖಾಲಿ ನಿವೇಶನವಿದ್ದು, ಅಲ್ಲಿ ಶಾಲಾ ಕಟ್ಟಡದ ಕಾಮಗಾರಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೋಟೆ ಕೆಳಭಾಗವಾದ್ದರಿಂದ ಕಟ್ಟಡಕ್ಕೆ ಸರಿಯಾಗಿ ಅಡಿಪಾಯ ಬೀಳುವುದಿಲ್ಲ ಎಂಬ ಅನುಮಾನವಿದೆ. ಆದ್ದರಿಂದ ಕಾಮಗಾರಿ ಪ್ರಾರಂಭಿಸಿಲ್ಲ. ನಗರಸಭೆಯವರು ಬೇರೆ ಕಡೆ ನಿವೇಶನ ನೀಡಿದರೆ ಇಲಾಖೆ ಕೃತಜ್ಞವಾಗಿರುತ್ತದೆ ಎಂದು ಹೇಳುತ್ತಾರೆ.
ಬೇರೆ ಕಡೆ ನಿವೇಶನ ಇದ್ದರೂ, ಹುಡುಕುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ. ನಗರಸಭೆಗೆ ಮನವಿ ಮಾಡಿಕೊಂಡರೆ ನಿವೇಶನ ಸಿಗುತ್ತಿತ್ತು ಎಂದು ಬಡಾವಣೆಯ ಭೀಮುನಾಯಕ ಹೇಳುತ್ತಾರೆ.
ಒಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲೇ ಸರ್ಕಾರಿ ಶಾಲೆ ಮಕ್ಕಳು ಅವ್ಯವಸ್ಥೆ ಮಧ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಇಂಥ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ಹೀಗಾದಲ್ಲಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಳಚುವ ಯಾವ ಸಾಧ್ಯತೆಯೂ ಕಾಣುವುದಿಲ್ಲ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಇನ್ನಾದರೂ ಶಿಕ್ಷಣ ಇಲಾಖೆ ಈ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ವ್ಯವಸ್ಥೆ ಕೈಗೊಳ್ಳುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.
-ನಾರಾಯಣ ಹೆಗಡೆ