ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಳೆ ಜೇವರ್ಗಿಗೆ ರಂಭಾಪುರಿ ಶ್ರೀ

Lingaraj Badiger
Updated On : 20 Jun 2013, 11:06 am

ಜೇವರ್ಗಿ: ತಾಲೂಕು ಜಂಗಮ ಸಮಾಜದ ವತಿಯಿಂದ ಜೂ.21ರಂದು ಬೆ.10.30ಕ್ಕೆ ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಪ್ರಥಮ ಜಂಗಮ ಸಮಾವೇಶ, ರೇಣುಕಾಚಾರ್ಯರ ಜಯಂತಿ ಹಾಗೂ ಪಂಚಾಚಾರ್ಯ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಮಾರಂಭವನ್ನು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶ್ರೀಗಳು ಉದ್ಘಾಟಿಸಲಿದ್ದಾರೆ ಎಂದು ಚಂದ್ರಶೇಖರ ಪುರಾಣಿಕ ತಿಳಿಸಿದ್ದಾರೆ. ಬೆ.9 ಗಂಟೆಗೆ ಪಟ್ಟಣದ ಬಿಜಾಪುರ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಿಂದ ಸಜ್ಜನ್ ಕಲ್ಯಾಣ ಮಂಟಪದವರೆಗೆ ಶ್ರೀಗಳನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಗುವುದು. 11ಕ್ಕೆ ರಂಭಾಪುರಿ ಜಗದ್ಗುರು ಸಾನ್ನಿಧ್ಯದಲ್ಲಿ ಸಮಾವೇಶವನ್ನು ಶಾಸಕ ಡಾ. ಅಜಯಸಿಂಗ್ ಉದ್ಘಾಟಿಸುವರು. ಕೆಪಿಸಿಸಿ ಸದಸ್ಯ ಶಾಂತಗೌಡ ದುಮ್ಮದ್ರಿ ನೇತೃತ್ವ. ಜಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಅಧ್ಯಕ್ಷತೆ. ಗುವಿವಿ ಪ್ರಾಧ್ಯಾಪಕ ಡಾ. ಎಸ್.ಎಂ. ಹಿರೇಮಠ ಉಪನ್ಯಾಸ ನೀಡಲಿದ್ದಾರೆ. ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ನರಿಬೋಳ, ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಶಿವಶರಣಪ್ಪ ಸೀರಿ ಇತರ ಗಣ್ಯರು ಆಗಮಿಸಲಿದ್ದಾರೆ.
ರೈತರಿಗೆ ಕೃಷಿ ಇಲಾಖೆ ಮನವಿ
ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ರೈತರು ರಸಗೊಬ್ಬರ ಖರೀದಿಯಲ್ಲಿ ಮೋಸ ಹೋಗದೆ ಸೂಕ್ತ ಪರೀಕ್ಷೆ ನಡೆಸಿ, ಗುಣಮಟ್ಟದ ರಸಗೊಬ್ಬರ ಖರೀದಿಸಬೇಕು ಎಂದು ಚಿತ್ತಾಪುರ ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಕನಕ ಮನವಿ ಮಾಡಿದ್ದಾರೆ. ರೈತರು ರಸಗೊಬ್ಬರವಾದ ಯೂರಿಯಾವನ್ನು ನೀರಿನಲ್ಲಿ ಹಾಕಿದಾಗ ಕರಗುತ್ತದೆ ಮತ್ತು ತಣ್ಣಗೆ ಇರುತ್ತದೆ. ಡಿಎಪಿಯನ್ನು ಸುಣ್ಣದ ಜೊತೆ ತಿಕ್ಕಿದಾಗ ಘಾಟು ವಾಸನೆ ಬರುತ್ತದೆ. ಎಂಒಪಿಯನ್ನು ಅಂಗೈಯಲ್ಲಿ ಹಾಕಿ ನೀರು ಬೆರೆಸಿದಾಗ ಹರಳುಗಳು ಬೇರೆ ಬೇರೆಯಾಗುತ್ತವೆ. ನೀರಿನಲ್ಲಿ ಹಾಕಿದಾಗ ಮೇಲೆ ತೆಲುತ್ತವೆ. ಈ ಬಗ್ಗೆ ಪರಿಶೀಲನೆ ನಡೆಸಿ ಗುಣಮಟ್ಟದ ರಸಗೊಬ್ಬರವನ್ನು ಬಳಸಬೇಕು ಎಂದು ಮನವಿ ಮಾಡಿದ್ದಾರೆ.
'ನೀರನ್ನು ಕಾಯಿಸಿ ಕುಡಿಯಿರಿ'
ಗುಲ್ಬರ್ಗ: ಗುಲ್ಬರ್ಗ ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ಮತ್ತು ಬೆಣ್ಣೆತೋರಾ ನದಿಯ ನೀರನ್ನು ಶುದ್ಧಿಕರಿಸಿ ಸೂಪರ್ ಕ್ಲೋರಿನೇಷನ್ ಮಾಡಿ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಈಗ ಮಳೆಗಾಲ ಆರಂಭವಾಗಿದ್ದು, ತಗ್ಗುಗಳಲ್ಲಿ ಮಳೆ ನೀರು ಸಂಗ್ರಹಣೆಯಾಗಿ ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಇರುತ್ತದೆ. ನಾಗರೀಕರು ತಗ್ಗುಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು ಹಾಗೂ ನೀರನ್ನು ಕಾಯಿಸಿ ಆರಿಸಿ ಸೋಸಿ ಕುಡಿಯಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಗುಲ್ಬರ್ಗ ಉಪ ವಿಭಾಗ-1ರ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕರಲ್ಲಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement