ರೇಷನ್ ಕಾರ್ಡ್ ನವೀಕರಣ; ಅರ್ಜಿ ಸಲ್ಲಿಕೆಗಾಗಿ ಪರದಾಟ
ಆಳಂದ: ಪಟ್ಟಣ ಅಲ್ಲದೇ ಗ್ರಾಮೀಣ ಭಾಗದ 39 ಗ್ರಾಪಂ.ಗಳಲ್ಲಿ ಪಡಿತರ ಚೀಟಿ ಪಡೆಯುವ ಸಲುವಾಗಿ 5 ಹೊಸ ದಾಖಲೆಗಳನ್ನು ಸಲ್ಲಿಸುವ ಸಲುವಾಗಿ ಗ್ರಾಹಕರು ಪರದಾಡುತ್ತಿದ್ದಾರೆ.
ಕರ ತುಂಬಿದ ಪಾವತಿ, ಗುರುತಿನ ಚೀಟಿ, ಸ್ವಯಂ ಘೋಷಣಾ ಪತ್ರ, ವಿದ್ಯುತ್ ಬಿಲ್, ಆದಾಯ ಪ್ರಮಾಣ ಪತ್ರಗಳು ತೆಗೆದುಕೊಂಡು ಗಣಕಯಂತ್ರ ಕೇಂದ್ರಗಳಿಗೆ ಬಂದಾಗ ಎಲ್ಲವೂ ಸ್ಕ್ಯಾನ್ ಮಾಡಿ ಹಾಕಲಾಗುವುದರಿಂದ ಸರ್ವರ್ ಬ್ಯುಸಿ, ಆಗಾಗ ವಿದ್ಯುತ್ ಕೈಕೊಡುವುದು. ಹೊಸ ಪಡಿತರ ಚೀಟಿ ಪಡೆಯಲು ಪರಿಚಯಸ್ಥರ ಸಾಕ್ಷಿ ಹಾಗೂ ಕೈಬೆರಳು ಸ್ಕ್ಯಾನ್ ಮಾಡಬೇಕಾಗುತ್ತದೆ.
ಪಡಿತರ ಒಬ್ಬ ಗ್ರಾಹಕರ ದಾಖಲೆಗಳನ್ನು ನಮೂದಿಸಲು 40 ನಿಮಿಷಬೇಕು. ಒಂದು ಈ ಸಂದರ್ಭದಲ್ಲಿ ವಿದ್ಯುತ್ ಕಡಿತವಾದರೆ, ಸರ್ವರ್ ಬ್ಯುಸಿಯಾದರೆ ಮತ್ತೊಮ್ಮೆ ಅಪ್ಲೋಡ್ ಮಾಡಬೇಕಾಗುವ ಸ್ಥಿತಿ ಎದುರಾಗಿದೆ ಎಂದು ಗುತ್ತಿಗೆ ಪಡೆದ ಗಣಕಯಂತ್ರ ಮಾಲೀಕರು ತಮ್ಮ ಅಳಲನ್ನು 'ಕನ್ನಡಪ್ರಭ'ಕ್ಕೆ ತೋಡಿಕೊಂಡರು.
ಆಪರೇಟರ್ಗಳು ಗ್ರಾಮೀಣ ಭಾಗದಲ್ಲಿರುವ ತೊಂದರೆ ಇದು ನಮಗೆ ದಿನಾಲು ಅನುಭವಿಸುವಂತಾಗಿದೆ ಎಂದು ಆಪರೇಟರ್ ಸಂಘದ ಅಧ್ಯಕ್ಷ ರಾಜಕುಮಾರ ಸನಾದಿ ಹಾಗೂ ಪದಾಧಿಕಾರಿಗಳಾದ ಭೀಮಾಶಂಕರ ಪಾಟೀಲ್, ಮಲ್ಲಿನಾಥ ವಾಡೇದ್, ಚಂದ್ರಭಾಗಾ ನಡಗೇರಿ, ಸಂಗೀತಾ ಬಿರಾದಾರ, ದತ್ತಾ ಖರ್ಚಿನ, ಶಿವಶರಣಪ್ಪ ಕೊರಳ್ಳಿ, ವಿಜಕುಮಾರ ಕಡಗಂಚಿ, ಸಿದ್ದಮ್ಮ ಬೋಧನ, ಶಾಂತಪ್ಪ ಬೆಳಮಗಿ ಇವರು ಅಧಿಕಾರಿಗಳ ಮುಂದೆ ತಮ್ಮ ಗೋಳನ್ನು ತೋಡಿಕೊಂಡರು.
ಪಟ್ಟಣದಲ್ಲಿ ಮೂರು ಖಾಸಗಿ ಏಜೆನ್ಸಿಗಳ ಮೂಲಕ ಈ ಕೆಲಸ ಆರಂಭಿಸಲಾಗಿದೆ. ಇನ್ನೂ ಐದು ಖಾಸಗಿ ಏಜೆನ್ಸಿಗಳಿಗೆ ಅನುಮತಿ ನೀಡುವುದಕ್ಕಾಗಿ ಜಿಲ್ಲಾಧಿಕಾರಿಯನ್ನು ಕೋರಲಾಗಿದೆ. ವಾರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.