ಮಳೆಗಾಗಿ ದೇವರ ಮೊರೆ ಹೋದ ಜನತೆ
ಯಾದಗಿರಿ: ಮಳೆ ಆಗಮನಕ್ಕಾಗಿ ಇಲ್ಲಿನ ಮೌನೇಶ್ವರ ಭಕ್ತ ಮಂಡಳಿ ವತಿಯಿಂದ ಗುರುವಾರ ನಗರದ ಮೌನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಳೆಗೆ ಪ್ರಾರ್ಥಿಸಿ ಮೌನೇಶ್ವರನಿಗೆ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ರಾಜು ಹೆಂದೆ, ಈಗಾಗಲೇ ಮಳೆಗಾಲ ಆರಂಭವಾಗಿ 15 ದಿನ ಕಳೆದರೂ ಜಿಲ್ಲೆಯಲ್ಲಿ ಇನ್ನೂ ಮಳೆರಾಯನ ಆಗಮನವಾಗಿಲ್ಲ. ಇದರಿಂದ ಜಿಲ್ಲೆಯಲ್ಲಿನ ರೈತಾಪಿ ವರ್ಗ ಚಿಂತೆಗೀಡಾಗಿದ್ದು, ಕುಡಿವ ನೀರಿಗೂ ಹಾಹಾಕಾರ ಎದ್ದಿದೆ.
ಬೇರೆ ಕಡೆ ಮಳೆಯಾಗುತ್ತಿರುವ ವರದಿಯಾಗುತ್ತಿದ್ದರೂ ಜಿಲ್ಲೆಯಲ್ಲಿ ಇನ್ನೂ ಮಳೆಯಾಗಿಲ್ಲ. ಇದರಿಂದ ಕೆರೆ, ನದಿಗಳಲ್ಲಿ ನೀರಿಲ್ಲ. ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಆದ್ದರಿಂದ ಈಗ ದೇವರ ಮೊರೆ ಹೋಗುವುದೊಂದೇ ಉಳಿದ ದಾರಿ. ಆದ್ದರಿಂದ ಶೀಘ್ರದಲ್ಲಿ ಮಳೆ ಕರುಣಿಸುವಂತೆ ಮೌನೇಶ್ವರ ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಈ ಭಾಗಕ್ಕೂ ವರುಣ ದಯಪಾಲಿಸಲಿ: ಅಯ್ಯಣ್ಣ ಹುಂಡೇಕಾರ್ ಮಾತನಾಡಿ, ಉತ್ತರ ಭಾರತದಲ್ಲಿ ಮಳೆ ವಿಪರೀತವಾಗಿ ಬೀಳುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೇದಾರನಾಥ, ರುದ್ರಪ್ರಯಾಗ ಮತ್ತು ಬದರಿನಾಥ ಮುಂತಾದ ಪ್ರದೇಶಗಳಲ್ಲಿ ವರುಣ ರುದ್ರನರ್ತನ ವಾಡುತ್ತಿದ್ದಾನೆ. ಇದರಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇವೆ. ಅಲ್ಲದೇ ಈ ಭಾಗಕ್ಕೂ ವರುಣ ದಯಪಾಲಿಸಲಿ ಎಂದು ಮೊರೆ ಇಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವಂತ್ರಾಯ ಮಾಲಿಪಾಟೀಲ್, ನೂರೊಂದಪ್ಪ ಲೇವಡಿ, ವಿಶ್ವನಾಥ ಶಿರವಾರ, ವಿಜಯಕುಮಾರ ಶಿನ್ನೂರ, ಶರಣಗೌಡ ಅರಿಕೇರಾ ಸೇರಿದಂತೆ ಅನೇಕರು ಇದ್ದರು. ಪೂಜೆ, ಅಭಿಷೇಕ,ನಂತರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.