ವೇತನ ಬಿಡುಗಡೆಗೆ ಶಿಕ್ಷಕರ ಆಗ್ರಹ
ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.20
ಪ್ರೌಢಶಾಲಾ ಸಮನ್ವಯ ಶಿಕ್ಷಣ(ಐಇಡಿಎಸ್ಎಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹುಣಸಗಿಯ ಮಡಿವಾಳೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಕರು ಗುರುವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಿಕ್ಷಕ ರವಿಂದ್ರ ಪಾಟೀಲ್ ಮಾತನಾಡಿ, 2013- 14ನೇ ಸಾಲಿನ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಸಮನ್ವಯ ಶಿಕ್ಷಣ ಪೂರ್ಣಾವಧಿ ವೇತನ ಶ್ರೇಣಿಯ ಸರ್ಕಾರಿ ಮತ್ತು ಅನುದಾನಿಕ ಪ್ರೌಢಶಾಲೆಗಳಲ್ಲಿ, ಪದವಿ ಪೂರ್ವ ಕಾಲೇಜುಗಳಲ್ಲಿ ವಿಶೇಷ ಶಿಕ್ಷಕರ ನೇಮಕಾತಿಯನ್ನು ಅನುದಾನಿತ ಸಂಸ್ಥೆಯಾದ ಶಿವಯೋಗಿ ಸಂಗಮಾರ್ಯ ವಿದ್ಯಾಸಂಸ್ಥೆ ತಾಳಿಕೋಟಿ ಇವರ ಅಡಿಯಲ್ಲಿ ನಡೆಯುತ್ತಿರುವ ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಮುಖಾಂತರ ನೇಮಕಾತಿ ಹೊರಡಿಸಲಾಗಿದೆ.
ಅಡಕತ್ತರಿಯಲ್ಲಿ ಶಿಕ್ಷಕರು: ಅದರಂತೆ ಅರ್ಜಿಗಳನ್ನು ಸಲ್ಲಿಸಿ ನೇಮಕಾತಿ ಆದೇಶ ಪತ್ರವನ್ನು ಪಡೆದು ಆಯ್ಕೆಯಾದ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.
ಆದೇಶದಲ್ಲಿ ಸರ್ಕಾರಿ ಹೈಸ್ಕೂಲ್ಗಳಲ್ಲಿನ ವೇತನವನ್ನು ನಿಗದಿಪಡಿಸಲಾಗಿತ್ತು. ಆದರೆ ಸುಮಾರು ಒಂದು ವರ್ಷದಿಂದ ವೇತನವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈಗಾಗಲೇ ನಿಮ್ಮ ಸಂಸ್ಥೆಯವರು ನಿಮ್ಮ ಸಂಬಳ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ವಿದ್ಯಾ ಸಂಸ್ಥೆಯವರನ್ನು ವಿಚಾರಿಸಿದಾಗ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾಸಂಸ್ಥೆ ಮೇಲೆ ಕ್ರಮಕ್ಕೆ ಆಗ್ರಹ: ವಿಶೇಷ ಶಿಕ್ಷಕ ತರಬೇತಿ ಮೂಲ ದಾಖಲೆ ಪತ್ರಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ದಾಖಲೆ ಪತ್ರಗಳನ್ನು ಕೇಳಿದರೆ 3 ವರ್ಷದವರೆಗೆ ನೀಡುವುದಿಲ್ಲ ಎಂದು ಸಂಸ್ಥೆಯವರು ಹೇಳುತ್ತಿದ್ದಾರೆ.
ವೇತನವಿಲ್ಲದೆ ಜೀವನ ನಡೆಯುವುದು ತುಂಬಾ ಕಷ್ಟವಾಗಿದ್ದು, ಕೂಡಲೇ ವಿದ್ಯಾಸಂಸ್ಥೆಯ ಮೇಲೆ ಸೂಕ್ತ ಕೈಗೊಂಡು ವೇತನ ಹಾಗೂ ಭತ್ಯೆಯನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಶರಣಪ್ಪ ಉಳ್ಳೆಸೂಗುರು, ವೆಂಕಾರಡ್ಡಿ ಪಾಟೀಲ್, ಗಂಗಾರಡ್ಡಿ ಪಾಟೀಲ್, ಮಲ್ಲಿಕಾರ್ಜುನ ಗೋಸಿ, ಭರತಕುಮಾರ ಪೂಜಾರಿ, ಶಾಂತಾ ಪಾಟೀಲ್, ಜ್ಯೋತಿ ಪ್ರಧಾನಿ, ಸುಧಾರಾಣಿ, ಜಯಶ್ರೀ, ವಿಜಯಲಕ್ಷ್ಮೀ, ಭೀಮಶಪ್ಪ, ಅನಂತರಡ್ಡಿ, ಅಜೀತಕುಮಾರ ಮೊದಲಾದವರು ಹಾಜರಿದ್ದರು.