ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಸಾಮೂಹಿಕ ವಿವಾಹಗಳಿಂದ ಸಾಮರಸ್ಯ'

Lingaraj Badiger
Updated On : 21 Jun 2013, 11:15 am

ಸುರಪುರ: ಒಣ ಪ್ರತಿಷ್ಠೆಗೆ ಜೋತು ಬಿದ್ದು ಪ್ರತ್ಯೇಕ ವಿವಾಹ ಮಾಡುವುದರ ಬದಲು ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಜಾತಿರಹಿತವಾಗಿ ನಡೆಯುವ ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಾಮರಸ್ಯ ತರುತ್ತವೆ ಎಂದು ನಾಲವಾರ ಕೋರಿಸಿದ್ದೇಶ್ವರ ಮಠದ ತೋಟೇಂದ್ರ ಶಿವಾಚಾರ್ಯರು ಸಲಹೆ ನೀಡಿದರು.
ತಾಲೂಕಿನ ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಬುಧವಾರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರೋತ್ಸಾಹಿಸಿ: ಸಾಮೂಹಿಕ ವಿವಾಹದಲ್ಲಿ ಜಾತಿ ತಾರತಮ್ಯವಿಲ್ಲದೆ ಎಲ್ಲ ಜಾತಿ ಜನಾಂಗದವರನ್ನು ಒಟ್ಟುಗೂಡಿಸಿ ವಿವಾಹ ಮಾಡಲಾಗುತ್ತದೆ. ವಧು-ವರರನ್ನು ಆಶೀರ್ವದಿಸುವ ನೆಪದಲ್ಲಿ ವಿವಿಧ ಕೋಮಿನ ಜನರು ಒಂದೆಡೆ ಸೇರಿದಂತಾಗುತ್ತದೆ. ಯಾವುದೇ ಖರ್ಚಿಲ್ಲದೆ ಮಾಡುವ ವಿವಾಹದಿಂದ ಪಾಲಕರಿಗೂ ನೆರವಾಗಲಿದೆ. ಇಂತಹ ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು. ಇದಕ್ಕೆ ಸಾರ್ವಜನಿಕರು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
ಸಾಮೂಹಿಕ ವಿವಾಹದಲ್ಲಿ ಹರಗುರು ಚರಮೂರ್ತಿಗಳಿಂದ ಆಶೀರ್ವಾದ ಪಡೆಯುವ ನವ ವಧು- ವರರ ಜೀವನ ಧನ್ಯವಾಗುತ್ತದೆ. ಈ ವಿವಾಹದಲ್ಲಿ ಮದುವೆಯಾದ ದಂಪತಿ ಗುರು- ಹಿರಿಯರನ್ನು, ತಂದೆ- ತಾಯಿಗಳನ್ನು ಗೌರವದಿಂದ ಕಾಣಬೇಕು. ಮಿತ ಸಂತಾನಕ್ಕೆ ಮೊದಲಾದ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.
32 ಜೋಡಿ ದಾಂಪತ್ಯಕ್ಕೆ: 32 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಮಠದ ವತಿಯಿಂದ ತಾಳಿ, ಕಾಲುಂಗುರು, ಬಟ್ಟೆ ಬರೆ ನೀಡಲಾಯಿತು.
ಕರಡಕಲ್ ಮಠದ ಶಾಂತರುದ್ರಮುನಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುದುನೂರಿನ ಮಲ್ಲಿಕಾರ್ಜುನ ದೇವರು, ಹರನಾಳದ ದೊಡ್ಡಯ್ಯ ಶರಣ, ನಗನೂರಿನ ಶರಣಪ್ಪ ಶರಣ, ಗದುಗಿನ ಮಡಿವಾಳಪ್ಪ, ಯಡ್ರಾಮಿಯ ರುದ್ರಮುನಿ ಸ್ವಾಮೀಜಿ, ಕೆಂಭಾವಿಯ ಬೀರಪ್ಪ ದೇವರು, ಖೈರವಾಡಗಿಯ ಶರಣಪ್ಪ ಶರಣರು, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟಿ, ಸಂಗನಗೌಡ ವಜ್ಜಲ್, ಶರಣು ದಂಡಿನ, ರವಿ ಸೂನ್ನದ ಇತರರು ಇದ್ದರು. ಶಿವಪ್ರಕಾಶ ಸ್ವಾಗತಿಸಿದರು. ಪ್ರಕಾಶ ಅಂಗಡಿ ನಿರೂಪಿಸಿದರು. ಮಲ್ಲಯ್ಯ ಪರಸನಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement