ಹಾಸ್ಟೆಲ್ ಅವ್ಯವಸ್ಥೆ: ಅಸಮಾಧಾನ
ಗುರುಮಠಕಲ್: ಪಟ್ಟಣದ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಜಿಪಂ ಉಪಧ್ಯಕ್ಷ ಶರಣಿಕಕುಮಾರ ದೋಖಾ ಹಠಾತ್ ಭೇಟಿ ನೀಡಿ ನಿಲಯದಲ್ಲಿನ ವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳಿಗೆ ನೀಡುತ್ತಿರುವ ಊಟ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಕೇಳಿ ತಿಳಿದರು. ಬೆಳಗ್ಗೆ ನೀಡಬೇಕಾದ ಉಪಹಾರವನ್ನು ಮಧ್ಯಾಹ್ನ ನಿಡುತ್ತಾರೆ. ಮಧ್ಯಾಹ್ನದ ಊಟವನ್ನು ತಡವಾಗಿ ಕೊಡುತ್ತಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಇದರಿಂದ ಆಶ್ಚರ್ಯಗೊಂಡ ಉಪಾಧ್ಯಕ್ಷರು, 'ಇಲ್ಲಿನ ಮೇಲ್ವಿಚಾರಕರು ಉಲ್ಟಾ ಇದ್ದಾರೇನು, ಯಾವಗಾ ಏನು ನೀಡಬೇಕು ಎನ್ನುವುದು ತಿಳಿಯುವುದಿಲ್ಲವೇ' ಎಂದು ಪ್ರಶ್ನಿಸಿದರು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಊಟ ಉಪಾಹಾರ ನೀಡುವಂತೆ ಸೂಚಿಸಿದರು.
ಮೇಲ್ವಿಚಾರಕರಿಗೆ ತರಾಟೆ: ನಂತರ ಮಕ್ಕಳು ವಾಸಿಸುವ ಕೊಠಡಿಗೆ ಭೇಟಿ ನಿಡಿದ ಅವರು ಅಲ್ಲಿ ಮುರಿದು ಬಿದ್ದಿರುವ ಮಂಚ ಹಾಗೂ ಸರಿಯಾದ ಹಾಸಿಗೆಗಳು ಇಲ್ಲದೇ ಮಕ್ಕಳು ಕಷ್ಟ ಅನುಭವಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು. ಸೌಲಭ್ಯವನ್ನು ಸರಿಯಾಗಿ ನೀಡಲು ಆಗದಿದ್ದರೆ ಯಾಕೆ ಇಲ್ಲಿರಬೇಕು. ವಾರದೊಳಗೆ ವ್ಯವಸ್ಥೆಯನ್ನು ಸರಿಪಡಿಸಲು ಸೂಚಿಸಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ್ಯ ಕಂದಕೂರ, ಲಿಂಗಪ್ಪ ತಾಂಡೂರಕ್ ಇದ್ದರು.