ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲ; ಆರೋಪ
ಚಿಂಚೋಳಿ: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ತಾಲೂಕು ಅಬಕಾರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರಮೇಶ ಯಾಕಾಪುರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಂಚೋಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಿಮೆ ದರದಲ್ಲಿರುವ ಮದ್ಯದ ಬಾಟಲಿಗಳನ್ನು ಹಳ್ಳಿಗಳಲ್ಲಿ ಮತ್ತು ಕಿರಾಣಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗಳಿಗೆ ಮಾರಾಟವಾಗುತ್ತಿದ್ದು, ಇದರಿಂದ ಬಡ, ಕೂಲಿ ಕಾರ್ಮಿಕ, ಶ್ರಮಿಜೀವಿಗಳ ಮೇಲೆ ಹೊರೆಯಾಗಿದೆ ಎಂದು ತಿಳಿಸಿದರು. ದೇವಸ್ಥಾನ, ಶಾಲಾ- ಕಾಲೇಜು, ಹರಿಜನವಾಡಗಳಲ್ಲಿ ಮದ್ಯ ಮಾರಾಟ ನಡೆಸದಂತೆ ಕಾನೂನು ಇದೆ. ಆದರೆ ಇಂದು ಕಿರಾಣಿ ಅಂಗಡಿ, ಪಾನ್ಶಾಪ್ ಅಂಗಡಿಗಳಲ್ಲಿ ಹಾಗೂ ಪ್ರತಿಯೊಂದು ತಾಂಡಾಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದರು. ಮುಂಗಾರು ಬಿತ್ತನೆ ಪ್ರಾರಂಭವಾಗಿದ್ದು, ರೈತರಿಗೆ ಸಮರ್ಪಕವಾಗಿ ಬೀಜ ಮತ್ತು ಗೊಬ್ಬರ ಸಿಗುತ್ತಿಲ್ಲ. ಹೆಸರು ಬೀಜ ಬೇಡಿಕೆ ಹೆಚ್ಚಾಗಿದೆ. ಬಡವರಿಗೆ ರೇಷನ್ ಕಾರ್ಡು ಸಿಗುತ್ತಿಲ್ಲ. ಚಿಂಚೋಳಿ ಮತಕ್ಷೇತ್ರದಲ್ಲಿ ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳಿಂದಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ಡೊನೇಷನ್ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕು ಎಂದು ರಮೇಶ ಯಾಕಾಪುರ ಆಗ್ರಹಿಸಿದರು.