ಕೂತಲ್ಲೇ ಬಿಲ್; ಇನ್ನು ನಡೆಯಲ್ಲ
ಕನ್ನಡಪ್ರಭ ವಾರ್ತೆ ಶಹಾಪುರ ಜೂ.21
ಕುಳಿತಲ್ಲೇ ಕಾಮಗಾರಿಗಳ ಬಿಲ್ ಮಾಡುವ ಕೆಲಸ ಇನ್ನು ಮುಂದೆ ನಡೆಯುವುದಿಲ್ಲ. ಯಾವುದೇ ಶಿಫಾರಸು ಬೇಕಾಗಿಲ್ಲ. ಅಧಿಕಾರಿಗಳು, ಪಿಡಿಒಗಳಿಂದ ಪಾರದರ್ಶಕತೆಯ ಕೆಲಸವನ್ನು ನಿರೀಕ್ಷಿಸುತ್ತೇನೆ. ಹೊಣೆಗಾರಿಕೆಯಿಂದ ನುಣುಚಿಕೊಂಡರೆ ಶಿಸ್ತು ಕ್ರಮ ಅನಿವಾರ್ಯ ಎಂದು ನೂತನ ಶಾಸಕ ಗುರುಪಾಟೀಲ ಶಿರವಾಳ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಶಾಸಕ ಗುರುಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಆಡಳಿತ ಯಂತ್ರ ಎಷ್ಟು ಚುರುಕಾಗಿ ಕಾರ್ಯ ಮಾಡುತ್ತದೆಯೋ ಅದು ಎಲ್ಲರಿಗೂ ಕೀರ್ತಿ ತರುವಂಥದ್ದು. ಯಾವುದೋ ಕಾರಣ ಹೇಳಿ ದೀನ ದುರ್ಬಲರ, ಬಡ ವರ್ಗದವರಿಗೆ ತಲುಪಬೇಕಾದ ಯೋಜನೆಗಳನ್ನು ಹಾಳುಗೆಡವಬೇಡಿ. ಮೂಲ ಸೌಕರ್ಯ ಪೂರೈಸುವುದು ನನ್ನ ಮೊದಲ ಆದ್ಯತೆ. ಸಮಸ್ಯೆ ಇದ್ದರೆ ನಾನು ನಿಮ್ಮ ಜೊತೆಗೆ ಬರುವೆ. ಯಾವುದೇ ಪಕ್ಷ, ಜಾತಿ, ತಾರತಮ್ಯ ಮಾಡದೇ ಅಧಿಕಾರಿಗಳು ಸಾಮಾಜಿಕ ನ್ಯಾಯ ಮತ್ತು ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕರ್ತವ್ಯ ಮರೆತರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಭೀಮಾ ನದಿಯಿಂದ ನೀರು: ಸರ್ಕಾರ ಅನುದಾನ ನೀಡಿದರೂ ಅರೆಬರೆ ಕೆಲಸ ಮಾಡಿ ಖರ್ಚು ಹಾಕಿ ಜವಾಬ್ದಾರಿಯಿಂದ ವಿಮುಖರಾಗಬೇಡಿ, ಏನೇ ಮಾಡಿದರೂ ಅದು ಶಾಶ್ವತ ಕೆಲಸವಾಗಬೇಕು. ಈ ದಿಸೆಯಲ್ಲಿ ಭೀಮಾ ಬ್ರಿಡ್ಜ್ ಕಂ ಬ್ಯಾರೇಜಿನಿಂದ ಮೂಡಬೂಳ, ಗೋಗಿ ಗ್ರಾಮಕ್ಕೆ ಪೈಪ್ಲೈನ್ ಮೂಲಕ ಕುಡಿವ ನೀರು ಪೂರೈಸಬೇಕು. ಈ ಕುರಿತು ಅಧಿಕಾರಿಗಳು ಯೋಜನೆ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಜತೆ ಚರ್ಚಿಸಲಾಗಿದೆ. ಈ ಯೋಜನೆ ಅನುಷ್ಠಾನದಿಂದ ಫ್ಲೋರೈಡ್ಯುಕ್ತ ನೀರಿನಿಂದ ತೊಂದರೆ ಅನುಭವಿಸುತ್ತಿರುವ ಕೆಲ ಗ್ರಾಮಗಳಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದರು.
ತಾಲೂಕಿನ ವಿಭೂತಿಹಳ್ಳಿ, ಗುಂಡಾಪುರ, ಹತ್ತಿಗೂಡೂರು, ಕೊಂಗಂಡಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆಯಿದ್ದು, ಇದರ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನವಾಗುತ್ತಿಲ್ಲ. ತಕ್ಷಣವೇ ಈ ಕುರಿತು ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ತಿಳಿಸದರು.
ಪಿಡಿಒಗಳ ಕಾರ್ಯವೈಖರಿ ಬದಲಾಗಲಿ: ಕೆಲವು ಪಿಡಿಒಗಳು ಹಳ್ಳಿಗಳ ಸಮಸ್ಯೆ ಅರಿಯುವುದನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಇನ್ನು ಸಮಸ್ಯೆಗಳ ಬಗ್ಗೆ ತಕ್ಷಣವೇ ಸ್ಪಂದಿಸದಿದ್ದರೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜನತೆಯ ವಿಶ್ವಾಸ ಗಳಿಸುವಂಥ ಕಾರ್ಯಕ್ಕೆ ಮುಂದಾಗಿ ಎಂದು ಸೂಚಿಸಿದರು.
ಬಹುತೇಕ ಕಾಮಗಾರಿಗಳು ಅನುಷ್ಠಾನವಾಗುವಲ್ಲಿ ಭೂ ಸೇನಾ ನಿಗಮದವರ ಪಾತ್ರ ದೊಡ್ಡದಿದೆ. ಅನುದಾನಗಳನ್ನು ಪಡೆದು ಸುವರ್ಣ ಗ್ರಾಮ ಯೋಜನೆ, ಶಾಲಾ ಕಟ್ಟಡ ಇನ್ನಿತರ ಕಾಮಗಾರಿ ನಿರ್ವಹಿಸಿದ್ದು, ಜನತೆಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇದರಿಂದ ಶಹಾಪುರ ಭೂಸೇನಾ ನಿಗಮದ ಕಾರ್ಯವೈಖರಿ ಬಗ್ಗೆ ಹಲವು ಅನುಮಾನಗಳಿದ್ದು, ಅವುಗಳನ್ನು ಪರಿಹರಿಸಲು ಎಲ್ಲೆಲ್ಲಿ ಕಾಮಗಾರಿ ನಡೆದಿವೆ, ಯಾವ ಹಣಕಾಸು ಯೋಜನೆಯಲ್ಲಿ ನಡೆದಿವೆ ಎಂಬ ಸಂಪೂರ್ಣ ಮಾಹಿತಿ ಎಲ್ಲರ ಗಮನಕ್ಕೆ ಬರಬೇಕು. ತಕ್ಷಣವೇ ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕೆಂದು ತಿಳಿಸಿದರು.
ರಸ್ತೆಗಳು ಕಾಣುತ್ತಿಲ್ಲ: ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ನಿರ್ಮಾಣವಾದ ರಸ್ತೆಗಳು ಈ ಹಿಂದೆ ಹೇಗಿದ್ದವೋ ಹಾಗೇ ಮುಂದುವರಿದಿವೆ. ಅಧಿಕಾರಿಗಳು ಕೇವಲ ರಸ್ತೆ ಕಾಮಗಾರಿ ಮುಗಿದಿದೆ ಎಂಬ ಪ್ರಗತಿ ವರದಿ ನೀಡಿದ್ದಾರೆಯೇ ಹೊರತು ಒಮ್ಮೆಯೂ ರಸ್ತೆ ಕಡೆ ಹೊರಳಿ ನೋಡಿಲ್ಲ. ಗೋಗಿ, ವನದುರ್ಗ ರಸ್ತೆ, ರಸ್ತಾಪುರದಿಂದ ಸಗರ, ನಾಯ್ಕಲ್ದಿಂದ ಹುರುಸಗುಂಡಿಗಿ ರಸ್ತೆ, ವನದುರ್ಗದಿಂದ ಶಟ್ಟಿಕೇರಾ, ಗಂಗನಾಳ ರಸ್ತೆಗಳು ಹೇಳ ಹೆಸರಿಲ್ಲದಂತಾಗಿವೆ. ಪುಟ್ಟಿ ಮಣ್ಣು ಕಾಣದೆ ತೆಗ್ಗು ದಿನ್ನೆಗಳಿಂದ ತುಂಬಿವೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕೆಂದು ಎಚ್ಚರಿಸಿದರು.
ರೈತರಿಗೆ ತೊಂದರೆ ಕೊಡಬೇಡಿ: ಕೃಷಿ ಇಲಾಖೆ ಮಾಹಿತಿ ಪಡೆದ ಅವರು, ಬಿತ್ತನೆ ಬೀಜ, ಗೊಬ್ಬರಕ್ಕಾಗಿ ರೈತರು ಪರದಾಡುವಂತೆ ಮಾಡಬೇಡಿ. ಅಗತ್ಯ ಬೀಜ ಗೊಬ್ಬರ ದಾಸ್ತಾನಿಟ್ಟುಕೊಂಡು ರೈತರಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ವಿದ್ಯುತ್ ಸಮಸ್ಯೆ ಹೆಚ್ಚಿದ್ದು, ಈ ಕುರಿತು ಜೆಸ್ಕಾಂ ಅಧಿಕಾರಿಗಳು ಗಮನ ನೀಡಬೇಕು ಎಂದರು. ನಾಲ್ಕು ಗಂಟೆಗಳ ಕಾಲ ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಿದ ಶಾಸಕರು, ಪ್ರಥಮ ಸಭೆಯನ್ನೇ ಗಂಭೀರವಾಗಿ ಪರಿಗಣಿಸಿ ಗಮನ ಸೆಳೆದರು.