ದಾಯಾದಿ ಕಲಹಕ್ಕೆ ಬೆಳೆದಿದ್ದ ಕಬ್ಬು ನಾಶ
ಕ.ಪ್ರ. ವಾರ್ತೆ ಯಾದಗಿರಿ ಜೂ.21
ತಾಲೂಕಿನ ಗಡಿಭಾಗದ ನಜರಾಪುರದಲ್ಲಿ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸಹೋದರನ ದ್ವೇಷಕ್ಕೆ ಇನ್ನೊಬ್ಬ ಸಹೋದರನ ಜಮೀನಿನಲ್ಲಿ ಬೆಳೆದು ನಿಂತ ನಾಲ್ಕು ಎಕರೆ ಕಬ್ಬು ನಾಶವಾಗಿರುವ ಘಟನೆ ನಡೆದಿದೆ.
ಗ್ರಾಮದ ರಘುನಾಥರೆಡ್ಡಿ ಅವರ ಹೊಲದಲ್ಲಿ ಬೆಳೆದು ನಿಂತಿದ್ದ ಕಬ್ಬು ದಾಯಾದಿ ಕಲಹಕ್ಕೆ ನಾಶವಾಗಿದೆ. ಆಸ್ತಿಯಲ್ಲಿ ತನಗೆ ಸರಿಯಾಗಿ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶಗೊಂಡ ರಘುತಾರೆಡ್ಡಿ ಅವರ ಮತ್ತೊಬ್ಬ ಸಹೋದರ ಗುರುವಾರ ಕಬ್ಬಿನ ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿ ಬೆಳೆ ನಾಶ ಮಾಡಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರು. ಬೆಲೆಯ ಕಬ್ಬು ನಾಶವಾಗಿದೆ. ಅಲ್ಲದೇ, ಕೃಷಿ ಪಂಪ್ಸೆಟ್ ಕಿತ್ತು ಹಾಕಿ, ನೀರಾವರಿ ಪೈಪ್ಗಳನ್ನು ಹಾಳು ಮಾಡಿದ್ದಾನೆ ಎನ್ನಲಾಗಿದೆ.
2 ವರ್ಷದಿಂದ ಉಳುಮೆ: ವಿಷಯ ತಿಳಿದು ತನ್ನ ಹೊಲಕ್ಕೆ ಶುಕ್ರವಾರ ಆಗಮಿಸಿದ ರಘುನಾಥರಡ್ಡಿ, 3 ವರ್ಷದ ಹಿಂದೆ ನನ್ನ ತಂದೆ ಪರ್ವತರಡ್ಡಿ ಅವರು ಪಂಚರು ಹಾಗೂ ನ್ಯಾಯವಾದಿಗಳ ಸಮ್ಮುಖದಲ್ಲಿ ಮೂರು ಜನ ಸಹೋದರರಿಗೆ ಭಾಗ ಮಾಡಿ ಉಳಿಮೆ ಮಾಡಿಕೊಳ್ಳಲು ಒಪ್ಪಂದ ಪತ್ರಕ್ಕೆ ಎಲ್ಲರೂ ಒಪ್ಪಿಗೆ ನೀಡಿ ಸಹಿ ಮಾಡಿದ್ದಾರೆ. ಎರಡು ವರ್ಷದಿಂದ ಈ ಜಮೀನಿನಲ್ಲಿ ನಾನು ಬೆಳೆ ಬೆಳೆಯುತ್ತಿದ್ದೇನೆಂದು ತಿಳಿಸಿದರು.
ಹುಲುಸಾಗಿ ಬೆಳೆದಿದ್ದ ಕಬ್ಬು ನೆಲಕ್ಕೆ ಬಿದ್ದಿರುವುದನ್ನು ಕಂಡು ಕಣ್ಣೀರಿಟ್ಟರು. ಸಹೋದರರು ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಅವರಿಂದ ನನ್ನ ಹಾಗೂ ಕುಟುಂಬಕ್ಕೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡಿ ಬೆಳೆ ನಷ್ಟ ಕೊಡಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗುರುಮಠಕಲ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಎಲ್.ಸಿ. ಕೋಲಕರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.