ನಕಲಿ ಹತ್ತಿ ಬೀಜ ಸಾಗಣೆ, ಇಬ್ಬರ ಬಂಧನ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.21
ನಕಲಿ ಹತ್ತಿ ಬೀಜಗಳನ್ನು ಮಿನಿ ಲಾರಿ ಮೂಲಕ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾಗ ತಾಲೂಕಿನ ರಾಮಸಮುದ್ರ ಬಳಿ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.
ರಾಮಕೃಷ್ಣ ಹಾಗೂ ಜಗದೀಶ ಬಂಧಿತರು. ತಾಲೂಕಿನ ರಾಮಸಮದ್ರ ಬಳಿ ಮನಿ ಲಾರಿಯೊಂದು ರಾಯಚೂರಿನಿಂದ ಯಾದಗಿರಿಗೆ ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ಲಾರಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಅದರಲ್ಲಿದ್ದ 8 ಮೂಟೆ ಹತ್ತಿ ಬೀಜಗಳ ಪಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ.
9.71 ಲಕ್ಷ ಮೌಲ್ಯದ ಬೀಜ: ಒಟ್ಟು 1,045 ಪ್ಯಾಕೆಟ್ ಹತ್ತಿ ಬೀಜ ವಶಕ್ಕೆ ಪಡೆದುಕೊಂಡಿದ್ದು, ಇದರ ಅಂದಾಜು ಮೌಲ್ಯ 9.71 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪ್ರಭಾರಿ ಎಸ್‌ಪಿ ಬಿ.ಮಹಾಂತೇಶ ತಿಳಿಸಿದ್ದಾರೆ.
ಹತ್ತಿ ಬೀಜದ ಪ್ಯಾಕೆಟ್‌ಗಳ ಮೇಲೆ ಶ್ರೀ ಸಾಯಿ ಸೀಡ್ಸ್ ಎಂಬ ಹೆಸರಿದ್ದು, ನೋಂದಣಿಯಾಗದ ಕಂಪನಿ ಇದಾಗಿದೆ ಎನ್ನಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಶಾಮೀಲಾದವರ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಮಹಾಂತೇಶ ತಿಳಿಸಿದ್ದಾರೆ. ಗ್ರಾಮೀಣ ಠಾಣೆ ಪಿಎಸ್‌ಐ ಗುರುಶಾಂತ ದಾಶ್ಯಾಳ ನೇತೃತ್ವದ ತಂಡ ದಾಳಿ ನಡೆಸಿದೆ. ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ ಇದ್ದರು.