'ನಗನೂರು ಶಾಲೆ ಶಿಕ್ಷಕರ ನೇಮಕಕ್ಕೆ ಕ್ರಮ'
ಕೆಂಭಾವಿ: ಸಮೀಪದ ನಗನೂರ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ಒದಗಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ನಗನೂರ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಕೃಷಿ ಕಾರ್ಮಿಕ ಸಂಘಟನೆಯ ವಿ.ಜಿ. ದೇಸಾಯಿ, ಶಿಕ್ಷಣವು ಹಣ ಇದ್ದವರಿಗೆ ಒಂದು, ಇಲ್ಲದವರಿಗೆ ಇನ್ನೊಂದು ಎಂಬಂತಾಗಿದೆ. ಇಂಥ ನೀತಿ ವಿರುದ್ಧ ಜನ ಸಾಮಾನ್ಯರು ಒಂದಾಗಿ ಹೋರಾಟ ಮಾಡಿದಾಗ ಸಮಸ್ಯೆ ಪರಿಹಾರ ಮಾಡಲು ಸಾಧ್ಯ ಎಂದು ಹೇಳಿದರು. ಶಿಕ್ಷಣಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಈ ಭಾಗದ ಮಕ್ಕಳು ಕೆಲವು ಅನಾನುಕೂಲತೆಯಿಂದ ಶಿಕ್ಷಣದಿಂದ ವಂಚಿತಗೊಂಡಿದ್ದು, ಇದಕ್ಕೆ ನಗನೂರ ಗ್ರಾಮದ ಪ್ರಾಥಮಿಕ ಶಾಲೆಯೇ ತಾಜಾ ಉದಾಹರಣೆ ಎಂದರು.
20 ದಿನವಾದ್ರೂ ತರಗತಿ ಆರಂಭವಾಗಿಲ್ಲ: ಶಾಲೆ ಆರಂಭವಾಗಿ 20 ದಿನ ಕಳೆದರೂ ಶಿಕ್ಷಕರಿಲ್ಲದೇ ತರಗತಿ ಪ್ರಾರಂಭವಾಗಿಲ್ಲ. ತಕ್ಷಣ ಶಿಕ್ಷಕರನ್ನು ನಿಯೋಜಿಸದಿದ್ದರೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಇದಕ್ಕೆ ಮಣಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಸಂಯೋಜಕಿ ನಳಿನಿಬಾಯಿ ಅವರನ್ನು ಸ್ಥಳಕ್ಕೆ ಕಳುಹಿಸಿದರು. ಅಲ್ಲದೇ ಒಬ್ಬ ಶಿಕ್ಷಕರನ್ನು ನೇಮಿಸಲು ಆದೇಶ ಹೊರಡಿಸಿ, ಇನ್ನೊಬ್ಬ ಶಿಕ್ಷಕರನ್ನು ವಾರದೊಳಗೆ ನಿಯೋಜಿಸುವುದಾಗಿ ಭರವಸೆ ನೀಡಿದರು. ಶಿವರಾಜ ಹೆಳವರ, ಶರಣು ಜೆ.ಡಿ, ದೇವಿಂದ್ರ ಬಿಂಜಲಬಾವಿ, ಚಾಂದಪಾಶಾ, ಸಿದ್ದನಗೌಡ ಗೂಗಲ್, ಈರಯ್ಯ ಸ್ಥಾವರಮಠ, ಭೀಮಣ್ಣ, ಮುರಿಗೆಪ್ಪ, ಕೆಂಚಪ್ಪ ಬಿಸ್ಟೆಪ್‌ಗೋಳ್, ಶರಣು, ಯಂಕಮ್ಮ ಮಡ್ಡಿ, ಭೀಮಬಾಯಿ ಇದ್ದರು.