ನತದೃಷ್ಟೆ ಲಕ್ಷ್ಮೀ ಬದುಕಲ್ಲಿ ನವ ಪಲ್ಲವ...
ಕನ್ನಡಪ್ರಭ ವಾರ್ತೆ, ಗುಲ್ಬರ್ಗ,ಜೂ.21
'ಆಡದೆ ಮಾಡುವವ ರೂಢಿಯೊಳಗುತ್ತಮನು...' ಎಂಬ ಸರ್ವಜ್ಞ ವಾಣಿಯಂತೆ ಗಡಿಲಿಂಗದಳ್ಳಿ ಬಲಾತ್ಕಾರ ಪ್ರಕರಣದಲ್ಲಿ ನೊಂದ ಬಾಲೆಯೊಂದಿಗೆ ಇಲ್ಲಿನ ಜಿಪಂ ಸಿಇಒ ಪಲ್ಲವಿ ಸ್ಪಂದಿಸಿದ ಪರಿ ಅನನ್ಯ. ಗುಲ್ಬರ್ಗದಲ್ಲಿನ ಈ ಪುಟ್ಟ ಬೆಳವಣಿಗೆ ಬಲಾತ್ಕಾರಕ್ಕೊಳಗಾದ ಬಾಲಕಿ ಬಾಳಲ್ಲಿ ನವ ಪಲ್ಲವ ಮೂಡಿಸಿದೆ.
ಘಟನೆ ದಿನಕ್ಕೊಂದು ಬಣ್ಣ ಬಳಿದುಕೊಂಡು ಅತ್ಯಾಚಾರಕ್ಕೊಳಗಾದವರನ್ನು ಮಾನಸಿಕ ಖಿನ್ನರಾಗಿಸುತ್ತದೆ ಸಮಾಜ. ಓರಗೆಯವರು, ಅಷ್ಟೆ ಯಾಕೆ ಮನೆ ಮಂದಿಯಿಂದಲೂ ತಿರಸ್ಕೃತರಾಗುವ ಇವರು ಹೋಗಬೇಕೆಲ್ಲಿಗೆ? ಬದುಕಬೇಕು ಹೇಗೆ? ಇಂತಹವರಿಗೆ ಯಾರು ಆಸರೆ? ಅತ್ಯಾಚಾರದ ಸಿಂಹಪಾಲು ಪ್ರಕರಣಗಳಲ್ಲಿ ಎಲ್ಲರನ್ನು ಕಾಡುವ ಇಂತಹ ಪ್ರಶ್ನೆಗಳಿಗೆ ಗುಲ್ಬರ್ಗದ ಸಿಇಒ ಪಲ್ಲವಿ ಉತ್ತರ ನೀಡುವ ಯತ್ನ ಮಾಡಿದ್ದಾರೆ.
ಕಿತ್ತು ತಿನ್ನುವ ಬಡತನ: ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿಯ ದನಗಾಹಿ ಲಕ್ಷ್ಮೀ(ಹೆಸರು ಬದಲಿಸಲಾಗಿದೆ) 2012ರ ಡಿಸೆಂಬರ್ ತಿಂಗಳಲ್ಲಿ ತಮ್ಮೂರಲ್ಲೇ ಕಾಮುಕರಿಂದ ಬಲಾತ್ಕಾರಕ್ಕೊಳಗಾದ ಬಾಲಕಿ.
ಘಟನೆ ಸಂಭವಿಸಿದ 2 ದಿನದಲ್ಲೇ ಲಕ್ಷ್ಮೀಯನ್ನು ಮತ್ತೆ ದನ ಕಾಯುವ ಕೆಲಸಕ್ಕೆ ಅವರ ಪೋಷಕರು ಕಳುಹಿಸಿದ್ದರಂತೆ, ಆ ಕುಟುಂಬದ ದುರವಸ್ಥೆಗೆ ಇದಕ್ಕಿಂತ ಬೇರೆ ಕನ್ನಡಿ ಬೇಕೆ?
ಗಡಿಲಿಂಗದಳ್ಳಿಯ ಲಕ್ಷ್ಮೀ ಕಾಮುಕರ ಕಪಿಮುಷ್ಟಿಗೆ ಸಿಲುಕಿ ನಲುಗಿದ್ದು ಸುದ್ದಿಯಾದಾಗ ಗಲಿಬಿಲಿಗೊಂಡಿದ್ದ ಸಿಇಒ ಪಲ್ಲವಿ ಆಕುರಾತಿ, ಇದೇ ಸಂಗತಿ ತಾವು ಹಾಜರಿರುವ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿಯೂ ವಿಸ್ತೃತ ಚರ್ಚೆಗೆ ಗ್ರಾಸವಾದಾಗ ನತದೃಷ್ಟೆ ಲಕ್ಷ್ಮೀಯ ಬಗ್ಗೆ ತುಂಬಾ ಮುತುವರ್ಜಿ ಬೆಳೆಸಿಕೊಂಡರು.
ನೊಂದಿರುವ ಬಾಲಕಿಗೆ ಸಿಇಒ ಮೊದಲ್ಗೊಂಡು ಜಿಪಂ ಅಧಿಕಾರಿಗಳ ಸಂಬಳ ಹಾಗೂ ಸದಸ್ಯರ ಸಂಬಳ ಎಲ್ಲವನ್ನು ಕೂಡಿಸಿ ಆರ್ಥಿಕ ನೆರವು ನೀಡೋಣ ಎಂದು ಸದಸ್ಯೆ ಶೋಭಾ ಬಾಣಿ ಠರಾವು ಒಮ್ಮತದಿಂದ ಅಂಗೀಕೃತವಾಗಿ 7 ವರ್ಷಗಳ ಅವಧಿಯ ಬ್ಯಾಂಕ್ ಠೇವಣಿ(64,120 ರುಪಾಯಿ) ಪತ್ರವನ್ನೂ ಲಕ್ಷ್ಮೀ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಲಕ್ಷ್ಮೀ ಜೊತೆ ಆಪ್ತ ಸಮಾಲೋಚನೆ: ನೊಂದ ಬಾಲಕಿಗೆ ಆರ್ಥಿಕ ನೆರವು ನೀಡಿದ್ದು ಈ ಪ್ರಸಂಗದ ಒಂದು ಹಂತ ಅಷ್ಟೆ. ಆದರೆ ಅದ್ಯಾಕೋ ಲಕ್ಷ್ಮೀ ಬಗ್ಗೆ ಆಸಕ್ತಿ, ಕುತೂಹಲ ಎರಡೂ ಹೆಚ್ಚಾಗಿ ಸಿಇಒ ಪಲ್ಲವಿ ಆಕುರಾತಿ ಅವಳ ಕುಟುಂಬದ ಹಿನ್ನೆಲೆ ಸಂಗ್ರಹಿಸಿದರು. ಅವಳೀಗ ಏನು ಮಾಡುತ್ತಿದ್ದಾಳೆಂಬುದರ ಮಾಹಿತಿಯನ್ನೂ ಪಡೆದಾಗ ಅವರಿಗೆ ನಿಜಕ್ಕೂ ಶಾಕ್ ಆಯ್ತು. ಬಲಾತ್ಕಾರಕ್ಕೊಳಗಾಗಿದ್ದ ಲಕ್ಷ್ಮೀಯನ್ನು ಅವರ ಪೋಷಕರು ಮತ್ತೆ ದನ ಕಾಯಲಿಕ್ಕೇ ಕಳುಹಿಸಿದ್ದರಂತೆ. ಇದರಿಂದ ಇನ್ನೂ ಗಲಿಬಿಲಿಗೊಂಡ ಪಲ್ಲವಿ, ಬಾಲಕಿಯ ಪೋಷಕರನ್ನು ಕಂಡು ಲಕ್ಷ್ಮೀಯನ್ನು ಶಾಲೆಗೆ ಕಳುಹಿಸುವಂತೆ ಕೋರಿದರೂ ಅವರು ಆ ಕೆಲ್ಸ ಮಾಡಲೇ ಇಲ್ಲ.
ತಕ್ಷಣ ಲಕ್ಷ್ಮೀಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಕರೆತಂದು ಅಲ್ಲಿ ಆಕೆಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಜೊತೆಗೆ ತಾವೇ ಖುದ್ದಾಗಿ ವಾರಕಾಲ ಲಕ್ಷ್ಮೀಯೊಂದಿಗೆ ಬೆರೆತು ಆಪ್ತ ಸಮಾಲೋಚನೆ(ಕೌನ್ಸೆಲಿಂಗ್) ಮಾಡಿದ್ದಾರೆ. ಕೊನೆಗೂ ಶಾಲೆಗೆ ಹೋಗುವಂತೆ ಆಕೆಯ ಮನಃ ಪರಿವರ್ತನೆ ಮಾಡುವಲ್ಲಿ ಪಲ್ಲವಿ ಯಶಸ್ವಿಯಾಗಿದ್ದಾರೆ.
ಖಿನ್ನಳಾಗಿದ್ದ ಲಕ್ಷ್ಮೀ, ದನ ಕಾಯುವುದೇ ಕಾಯಕ ಎಂದು ಗಟ್ಟಿಯಾಗಿ ನಂಬಿದವಳು. ಗಡಿಲಿಂಗದಳ್ಳಿಯಿಂದ ಗುಲ್ಬರ್ಗಕ್ಕೆ ಕರೆತಂದು ಆಕೆಯ ಮನಃ ಪರಿವರ್ತನೆ ಮಾಡುವುದು ಸುಲಭ ಕೆಲಸವೇನಲ್ಲ. ಆದರೆ ಈ ಕಾರ್ಯದಲ್ಲಿ ಸಿಇಒ ತೋರಿದ ಮುತುವರ್ಜಿ, ಅದು ನೀಡಿದ ಫಲ ಎಲ್ಲರೂ ಶ್ಲಾಘಿಸುವಂತಹದ್ದು. ಲಕ್ಷ್ಮೀ ಇದೀಗ ಸಿಇಒ ಪಲ್ಲವಿ ಅವರ ಸ್ಫೂರ್ತಿ ತುಂಬಿದ ಮಾತುಗಳಿಗೆ ಮನಸೋತು ಜೂನ್ ಮೊದಲ ವಾರದಿಂದಲೇ ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿದ್ದಾಳೆ.
ಬಾಲಮಂದಿರದಲ್ಲೇ ಸಿಇಒ ವಾಸ್ತವ್ಯ: ಲಕ್ಷ್ಮೀ ಸೇರಿದಂತೆ ಬಾಲ ಮಂದಿರದಲ್ಲಿ ಆಸರೆ ಪಡೆದಿರುವ ಎಲ್ಲಾ ಮಕ್ಕಳ ಯೋಗಕ್ಷೇವು ವಿಚಾರಿಸಲು, ಅವರೊಂದಿಗೆ ಬೆರೆತು ಕಾಲ ಕಳೆಯಲು ಸಿಇಒ ಪಲ್ಲವಿ ಕಳೆದ ಭಾನುವಾರ(ಜೂನ್ 16) ಬಾಲಮಂದಿರದಲ್ಲೇ ವಾಸ್ತವ್ಯ ಹೂಡಿದ್ದರಂತೆ. ಅನಾಥರು, ಬೀದಿಗೆ ಬಿದ್ದವರು, ದಿಕ್ಕಿಲ್ಲದವರು, ಅಂಗವಿಕಲರು ಹೀಗೆ ಹತ್ತು ಹಲವು ತೊಂದರೆಯಲ್ಲಿರುವವರೇ ವಾಸವಾಗಿರುವ ಬಾಲ ಮಂದಿರದಲ್ಲಿ ಸಿಇಒ ಪಲ್ಲವಿ ವಾಸ್ತವ್ಯ ಮಾಡುವ ಮೂಲಕ ಹೆಚ್ಚಿನ ಸಮಯ ನೊಂದವರೊಂದಿಗೆ ಚರ್ಚಿಸಿ ಅವರಿಗೆಲ್ಲರಿಗೂ ಧೈರ್ಯದ, ಸ್ಫೂರ್ತಿಯ ಮಾತುಗಳನ್ನು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ಅವರ ಇಲಾಖೆ ಸಿಬ್ಬಂದಿ ಅವರೂ ಈ ಕಾರ್ಯದಲ್ಲಿ ಸಿಇಒ ಅವರಿಗೆ ಜೊತೆಯಾಗಿ ನೊಂದ ಲಕ್ಷ್ಮೀಯನ್ನು ಶಾಲೆಗೆ ಅಣಿಗೊಳಿಸುವಲ್ಲಿ ಪಟ್ಟ ಶ್ರಮ ಮರೆಯುವಂತಿಲ್ಲ.
- ಶೇಷಮೂರ್ತಿ ಅವಧಾನಿ