ಬಸವ ತತ್ವ ವಿಶ್ವ ತತ್ವವಾಗಲಿ: ಶಾಂತವೀರ ಶ್ರೀ
ಕನ್ನಡಪ್ರಭ ವಾರ್ತೆ ಸುರಪುರ ಜೂ.21
ಶೋಷಣೆಗೆ ಒಳಗಾದ ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಅಪ್ಪಿಕೊಳ್ಳುವ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಿದ ಬಸವಣ್ಣ ಶೋಷಿತ ಜನಾಂಗದ ಆಶಾಕಿರಣ. ಸಮಾನತೆ ಸಂದೇಶ ಸಾರುವ ಬಸವಣ್ಣನವರ ತತ್ವ ವಿಶ್ವ ತತ್ವವಾಗುವುದು ಅವಶ್ಯ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕರಡಕಲ್ ಕೋರಿ ಸಿದ್ದೇಶ್ವರ ಶಾಖಾ ಮಠದಲ್ಲಿ 13ನೇ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಬಸವ ಜಯಂತಿಯ ಶತಮಾನೋತ್ಸವ, ಬಸವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಚಾರಿಕ ಬದುಕಿಗೆ ಬೆಳಕು ಚೆಲ್ಲಿದರು: 12ನೇ ಶತಮಾನದ ಜನಮಾನಸದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರ, ಬಾಲ್ಯ ವಿವಾಹದಂತ ಅನಿಷ್ಟಗಳನ್ನು ಕಿತ್ತೊಗೆಯಲು ಬಸವಣ್ಣನವರು ಅವಿರತವಾಗಿ ಶ್ರಮಿಸಿದರು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅವರ ಸಮಕಾಲೀನ ಶರಣರು ಈ ಕಾರ್ಯಕ್ಕೆ ಹೆಗಲುಗೊಟ್ಟು ನಿಂತರು. ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ವೈಚಾರಿಕ ಬದುಕಿಗೆ ಹೊಸ ಬೆಳಕನ್ನೇ ಚೆಲ್ಲಿದರು ಎಂದರು.
ಸಾನ್ನಿಧ್ಯ ವಹಿಸಿದ್ದ ನಾಲವಾರದ ತೋಟೇಂದ್ರ ಶಿವಾಚಾರ್ಯರು ಮಾತನಾಡಿ, ಬಸವಾದಿ ಶರಣರು ಡಂಬಾಚಾರಿಗಳಾಗಿರಲಿಲ್ಲ. ಅವರು ನುಡಿದಂತೆ ನಡೆದರು. ನುಡಿಯನ್ನು ಆಚರಣೆಯಲ್ಲಿ ತಂದು ಸಮಾಜಕ್ಕೆ ಮಾರ್ಗದರ್ಶನ ಮಾಡಿದರು. ಅವರ ತತ್ವ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.
ಆಕಾಶವಾಣಿ ಕಲಾವಿದ ಶರಣುಕುಮಾರ ಜಾಲಹಳ್ಳಿ ವಚನ ಗಾಯನ ಮಾಡಿದರು. ಶಾಂತಗೌಡ ಪಾಟೀಲ ಜನಪದಗಾಯನ ನಡೆಸಿ ಕೊಟ್ಟರು. ಪ್ರಭು ಸೊನ್ನದ ಭಾವಗೀತೆ ಪ್ರಸ್ತುತಪಡಿಸಿದರು. ಚಂದ್ರಶೇಖರ ಗೋಗಿ ಕೊಳಲು ವಾದನ ಮಾಡಿದರು. ಶಾಂತಕುಮಾರ ಜೇರಟಗಿ ತಬಲಾ ಸಾಥ್ ನೀಡಿದರು.
ಕರಡಕಲ್ ಮಠದ ಶಾಂತರುದ್ರಮುನಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುದುನೂರಿನ ಮಲ್ಲಿಕಾರ್ಜುನ ದೇವರು, ಹರನಾಳದ ದೊಡ್ಡಯ್ಯ ಶರಣ, ನಗನೂರಿನ ಶರಣಪ್ಪ ಶರಣ, ಗದುಗಿನ ಮಡಿವಾಳಪ್ಪ, ಯಡ್ರಾಮಿಯ ರುದ್ರಮುನಿ ಸ್ವಾಮೀಜಿ, ಕೆಂಭಾವಿಯ ಬೀರಪ್ಪ ದೇವರು, ಖೈರವಾಡಗಿಯ ಶರಣಪ್ಪ ಶರಣ, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ, ಸಂಗನಗೌಡ ವಜ್ಜಲ್, ಶರಣು ದಂಡಿನ, ರವಿ ಸೂನ್ನದ ಇತರರು ಇದ್ದರು.