ಸೇತುವೆ ಕಾಮಗಾರಿ ನೆನೆಗುದಿಗೆ
ಕನ್ನಡಪ್ರಭ ವಾರ್ತೆ , ಚಿಂಚೋಳಿ , ಜೂ.21
ತಾಲೂಕಿನ ರಾಯಚೂರು- ವನಮಾರಪಳ್ಳಿ, ಮನ್ನಾಎಖ್ಖೆಳ್ಳಿ- ಚಿಂಚೋಳಿ ರಾಜ್ಯ ಹೆದ್ದಾರಿ ರಸ್ತೆಯ ವ್ಯಾಪ್ತಿಯಲ್ಲಿನ ಫತ್ತೇಪುರ ಮತ್ತು ಕೊಳ್ಳುರ ಗ್ರಾಮಗಳ ಬಳಿ ಸಣ್ಣ ಸೇತುವೆಗಳ ನಿರ್ಮಾಣ ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ನಡೆಯುತ್ತಿದ್ದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ತುಮಕುಂಟಾ ಗ್ರಾಮ ಬೀದರ್ ಜಿಲ್ಲೆ ಗಡಿಭಾಗದವರೆಗೆ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗಲೀಕರಣದಲ್ಲಿ ಸಣ್ಣ ಸೇತುವೆಗಳನ್ನು ಸಹ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಕೊಳ್ಳೂರ ಮತ್ತು ಫತ್ತೇಪುರ ಗ್ರಾಮಗಳ ಹತ್ತಿರದಲ್ಲಿ ನಡೆಯುತ್ತಿರುವ ಸೇತುವೆ ಅಭಿವೃದ್ಧಿ ಕಾಮಗಾರಿ ಕಳೆದ ಒಂದು ವರ್ಷದಿಂದ ತುಂಬಾ ನಿಧಾನಗತಿಯಿಂದ ನಡೆಯುತ್ತಿದೆ.
ವಾಹನ ಸಂಚಾರಕ್ಕೆ ಅಡ್ಡಿ: ಮಳೆಗಾಲದಲ್ಲಿ ತುಂಬಾ ಕೆಸರು ಮತ್ತು ನಾಲಾದಲ್ಲಿ ಹರಿಯುವ ನೀರಿನಿಂದಾಗಿ ವಾಹನಗಳ ಸಂಚಾರಕ್ಕೆ ಭಾರಿ ಅಡ್ಡಿಯಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಆಂಧ್ರದ ಮಹೆಬೂಬನಗರ ಜಿಲ್ಲೆಯಿಂದ ಮುಂಬೈ, ಲಾತೂರ, ಉಸ್ಮಾನಬಾದ್, ಉದಗೀರ, ಬೀದರ್, ಹುಮನಾಬಾದ್, ಬಸವಕಲ್ಯಾಣ, ಪುಣೆ, ಹೈದ್ರಾಬಾದ್ ನಗರ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು, ಈ ರಸ್ತೆ ಮೂಲಕ ಇಲ್ಲಿಂದ ದಿನಾಲೂ ಕಲ್ಲು, ಪರಸಿ, ಸಿಮೆಂಟ್ ತುಂಬಿದ ಲಾರಿಗಳು ಸಂಚರಿಸುತ್ತಿದ್ದು, ರಸ್ತೆ ತುಂಬಾ ಹದಗೆಟ್ಟಿದ್ದರಿಂದ ರಸ್ತೆಯಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಿವೆ.
ಸಂಚಾರಕ್ಕೆ ಪರದಾಟ: ರಾಯಚೂರು- ವನಮಾರಪಳ್ಳಿ ರಾಜ್ಯ ಹೆದ್ದಾರಿಯಲ್ಲಿ ಬರುವ ಐನೋಳಿ, ದೇಗಲಮಡಿ, ಕೊಳ್ಳೂರು, ತುಮಕುಂಟಾ, ನಾಗಾಇದಲಾಯಿ, ಪಟಪಳ್ಳಿ, ಎಂಪಳ್ಳಿ, ಸಾಲೇಬೀರನಳ್ಳಿ, ಹಸರಗುಂಡಗಿ ಗ್ರಾಮಗಳಿಗೆ ವಾಹನ ಹೋಗಲು ತುಂಬಾ ಪ್ರಯಾಸ ಪಡಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸೇತುವೆ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.