ಆಳಂದ ತಾಪಂ; ಕ್ರಿಯಾ ಯೋಜನೆಗೆ ಅನುಮೋದನೆ
ಆಳಂದ: 2013-14ರ ತಾಪಂ ಕ್ರಿಯಾ ಯೋಜನೆ ಸಿದ್ಧಪಡಿಸಲು, ನಿಗದಿಪಡಿಸಿದ ಅನುದಾನಕ್ಕೆ ಸರ್ವಾನುಮತದಿಂದ ಸರ್ವ ಸದಸ್ಯರು ಅನುಮೋದನೆ ನೀಡಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಆರ್ಜಿಎಫ್ ಕ್ರಿಯಾಯೋಜನೆಗೆ ನಿಗದಿಪಡಿಸಿದ ಅನುದಾನಕ್ಕೆ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯ ಕ್ರಿಯಾ ಯೋಜನೆ ಹಾಗೂ 13ನೇ ಹಣಕಾಸು ಕ್ರಿಯಾ ಯೋಜನೆ ಅನುದಾನಕ್ಕೆ ಅನುಮೋದನೆ ನೀಡಲಾಯಿತು ಹಾಗೂ ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆ ಅನುದಾನಕ್ಕೆ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.
ಉಪಸ್ಥಿತರಿದ್ದ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ಸಲಹೆ ಸೂಚನೆ ನೀಡಿದರು. ಅಧ್ಯಕ್ಷೆ ಬಾಯಮ್ಮ ಪಾಟೀಲ್, ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಇಓ ಅಬ್ದುಲ್ ಸಲಾಂ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲಾಯಿತು.
ತೋಟಗಾರಿಕೆ ಇಲಾಖೆ: ಅಧಿಕಾರಿ ರಾಹುಲ್ ವರದಿ ಮಂಡಿಸಿ, ಆರ್ಕೆವಿವೈ ಯೋಜನೆಯಡಿ ಮಾದರಿ ನರ್ಸರಿಗಾಗಿ ಮಟೆರಿಯಲ್ ಸಲುವಾಗಿ 4 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಸಲು ಸಹಾಯಧನ ಹಾಗೂ ಸಣ್ಣ ನರ್ಸರಿಗೂ ಸಹಾಯ ಧನವಿದೆ ಎಂದರು.
ಸಮಾಜ ಕಲ್ಯಾಣ: ಪ್ರಭಾರಿ ಅಧಿಕಾರಿ ಕಮಲಾಬಾಯಿ ತಮನ್ ವರದಿ ಮಂಡಿಸಿ, 2013-14ನೇ ಸಾಲಿನ ಕ್ರಿಯಾಯೋಜನೆ ಅನುಮೋದನೆಯಾಗಿಲ್ಲ. ಗೊಂಚಲ ಗ್ರಾಮ ಆಯ್ಕೆ ಬಾಕಿಯಿದೆ ಎಂದಾಗ ಸದ ವಿ.ಕೆ.ಸಲಗರ, ನರೋಣಾ, ಸುಂಟನೂರ, ಮಾದನಹಿಪ್ಪರಗಾ, ನಿಂಗದಳ್ಳಿ, ಧುತ್ತರಗಾಂವ, ಸರಸಂಬಾ, ಜಿರೋಳಿ ತಾಂಡಾ, ಝಳಕಿ ಗ್ರಾಮಗಳು ಆಯ್ಕೆಗೆ ಸದಸ್ಯರು ಆದೇಶಿಸಲು ನಿರ್ದೇಶನ ನೀಡಲಾಯಿತು.
ಸಿಡಿಪಿಒ: ಸಿಡಿಪಿ ಅಶೋಕ ರಾಜನ್ ವರದಿ ಸಲ್ಲಿಸಿ, ಒಟ್ಟು 414 ಅಂಗನವಾಡಿ ಕಟ್ಟಡಗಳಿದ್ದು, ಅವುಗಳಲ್ಲಿ 246 ಸ್ವಂತ ಕಟ್ಟಡಗಳಿವೆ. 18 ಪಂಚಾಯತ್ ಕಟ್ಟಡ, 30 ಸಮುದಾಯ ಭವನ ಹಾಗೂ 19 ಶಾಲಾ ಮತ್ತು ಇತರೆ ಕಟ್ಟಡಗಳಲ್ಲಿ ನಡೆಯುತ್ತವೆ ಹಾಗೂ ಮೂರು ಮಹಿಳಾ ಮಂಡಳ, 27 ದೇವಸ್ಥಾನ ಕಟ್ಟಡಗಳು, 41 ಬಾಡಿಗೆ ಕಟ್ಟಡ ಮತ್ತು 30 ಕೇಂದ್ರಗಳಿಗೆ ಪರ್ಯಾಯ ವ್ಯವಸ್ಥೆ ಇರುವುದಾಗಿ ಹೇಳಿದರು.
ಪೂರಕ ಪೌಷ್ಟಿಕ ಆಹಾರ ಯೋಜನೆಯಡಿ ಮೇ 2013 ಒಟ್ಟು 77466 ಇದ್ದು, ಸಾಧನೆ 58311 ಅಂದರೆ, ಶೇ. 99.05 ಆಗಿದೆ. ತಿಂಗಳಲ್ಲಿ 25 ದಿನಗಳಿಗೆ ಆಹಾರ ಹಂಚಿಕೆ ಮಾಡುವುದಾಗಿ ತಿಳಿಸಿದಾಗ ಸದಸ್ಯ ಶರಣಗೌಡ ಪಾಟೀಲ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಶೇ. 50ರಷ್ಟು ಮಾತ್ರ ಅಂಗನವಾಡಿಗಳಿಗೆ ಧಾನ್ಯ ತೆಗೆದುಕೊಂಡು ಉಳಿದ ಧಾನ್ಯದ ವಿವರಣೆ ಕೇಳಿ ಮಾದನಹಿಪ್ಪರಗಾ ವಲಯದಲ್ಲಿ ಸಮರ್ಪಕ ಆಹಾರಧಾನ್ಯ ಪೂರೈಕೆಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಅಕ್ಷರ ದಾಸೋಹ: ಸಹಾಯಕ ನಿರ್ದೇಶಕ ಸಿದ್ಧರಾಮ ಚನ್ನಿಗುಂಡ ಅವರು, 1 ಜುಲೈ 2012ರಿಂದ ಮಾರ್ಚ 2013ರವರೆಗೆ ಒಟ್ಟು ಅನುದಾನ 2,97,2500 ಬಂದಿದ್ದು, 1,98,69570 ಖರ್ಚಾಗಿದೆ. ಉಳಿದ 98,55,430 ಉಳಿಕೆ ಅನುದಾನ ಲ್ಯಾಪ್ಸ್ ಆಗಿರುವುದಾಗಿ ವಿವರಿಸುತ್ತಿದ್ದಾಗ ಸದಸ್ಯ ಶರಣಗೌಡ ಪಾಟೀಲ್ ಹಿರೋಳಿಯಲ್ಲಿ ಅಡುಗೆಯವರಿಗೆ ಸಂಬಳ ನೀಡುವಂತೆ ಹೇಳಿದರು.
ರೇಷ್ಮೆ ಇಲಾಖೆ: ಪ್ರಸಕ್ತ ಸಾಲಿನಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಭೂಸೇನಾ ನಿಗಮ: ಸಹಾಯಕ ನಿರ್ದೇಶಕ ಬಿ.ವಿ. ಕಲಗುರ್ಕಿ ಅವರು, 2012-13ನೇ ಸಾಲಿನ ಎಸ್ಡಿಪಿ ಯೋಜನೆಯ ಅಡಿಯಲ್ಲಿ 10 ಅಂಗನವಾಡಿ ಕಟ್ಟಡಗಳು ನಿವೇಶನ ಪಡೆದು ಕೆಲಸ ಪ್ರಾರಂಬಿಸಲಾಗುವುದು. ಸುವರ್ಣ ಗ್ರಾಮ ಯೋಜನೆ 5ನೇ ಹಂತ ಒಟ್ಟು 16 ಕಾಮಗಾರಿಗಳಿದ್ದು, ಕ್ರಿಯಾ ಯೋಜನೆ ಅನುಮೋದನೆಯಾಗಿದೆ. ಶೀಘ್ರವೇ ಅಂದಾಜು ಪತ್ರಿಕೆ ತಯಾರಿಸಿ ಆಡಳಿತಾತ್ಮಕ ಮಂಜೂರಾತಿ ಪಡೆದು ಕಾಮಗಾರಿ ಮಾಡುವುದಾಗಿ ಹೇಳಿದರು.