ಜಿಲ್ಲಾದ್ಯಂತ ಇಂದು ಕಾರ ಹುಣ್ಣಿಮೆ
ಗುಲ್ಬರ್ಗ: ಜಿಲ್ಲೆಯಲ್ಲಿ ಭಾನುವಾರದ ಪೂರ್ಣಿಮೆಯನ್ನು ಕಾರ ಹುಣ್ಣಿಮೆ ಎಂದು ಎತ್ತುಗಳನ್ನು ಪೂಜಿಸಿ, ಅಲಂಕರಿಸಿ, ಅವುಗಳಲ್ಲೇ ಓಟ, ಭಾರ ಎತ್ತುವ ಸ್ಪರ್ಧೆಗಳನ್ನು ಏರ್ಪಡಿಸಿ ರೈತ ಸಮೂಹ ಸಂಭ್ರಮಿಸುತ್ತದೆ. ಇದು ಬಲು ಪುರಾತನ ಪರಂಪರೆಯಾಗಿ ಜಿಲ್ಲೆಯಲ್ಲಿ ನಡೆದುಕೊಂಡು ಬಂದಿದೆ.
ರೈತರೆಲ್ಲರೂ ತಾವು ಹೊಂದಿರುವ ಎತ್ತುಗಳು ಮೊದಲ್ಗೊಂಡು ಹಸುಗಳು, ಎಮ್ಮೆ, ಹೋರಿಗಳನ್ನೆಲ್ಲ ನದಿ, ಕೆರೆ, ಬಾವಿಗಳಿಗೆ ಒಯ್ದು ಜಳಕ ಮಾಡಿಸುತ್ತಾರೆ. ನಂತರ ಅವುಗಳಿಗೆ ವಿವಿಧ ಬಣ್ಣದಿಂದ ಸಿಂಗರಿಸುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿಯುತ್ತಾರೆ. ಕೊರಳಿಗೆ ಗಂಟೆ ಸರ ಹಾಕಿ ಅದರ ನಿನಾದ ಕೇಳಿ ಸಂತಸಪಡುತ್ತಾರೆ. ಇದೆಲ್ಲ ಆದ ನಂತರ ಕಾರ ಹುಣ್ಣಿಮೆ ಪ್ರಮುಖ ಘಟ್ಟದ ರೂಪದಲ್ಲಿ ಎತ್ತುಗಳ ನಡುವೆ ಓಟದ ಸ್ಪರ್ಧೆ ನಡೆಸಲಾಗುತ್ತದೆ.
ಜಿಲ್ಲೆಯಲ್ಲಿ ಇನ್ನೂ ಮುಂಗಾರು ಅಷ್ಟಾಗಿ ಕಾಲಿಟ್ಟಿಲ್ಲ. ನೇಗಿಲ ಹೊಡೆದು ಹೊಲ- ಗದ್ದೆ ಹದ ಮಾಡಿಕೊಂಡಿರುವ ರೈತರು ತಮ್ಮ ಎತ್ತುಗಳಿಗೆ ವಿರಾಮವನ್ನೇ ನೀಡುತ್ತಿದ್ದಾರೆ. ಈ ಹಂತದಲ್ಲಿ ಬಂದಿರುವ ಕಾರ ಹುಣ್ಣಿಮೆಯಂದು ಮಾತ್ರ ಜಿಲ್ಲೆಯಲ್ಲಿ ಆಚರಣೆ ಸಂಭ್ರಮ ಜೋರಾಗುವ ಲಕ್ಷಣಗಳಿವೆ. ಅಫಜಲ್ಪುರ ತಾಲೂಕಿನ ಮಣ್ಣೂರು, ಶಹಾಬಾದ್ ಹತ್ತಿರದ ಭಂಕೂರುಗಳಲ್ಲಂತೂ ಕಾರ ಹುಣ್ಣಿಮೆ ಎತ್ತುಗಳ ಕರಿ ಹರಿಯುವ ಸ್ಪರ್ಧೆ ಬಲು ಜೋರಾಗಿ ಹಾಗೂ ಮೈ ನವಿರೇಳಿಸುವಂತಹ ಎತ್ತುಗಳ ಸಾಹಸಗಳೊಂದಿಗೆ ಕೂಡಿರುತ್ತದೆ. ಇದನ್ನು ನೋಡಲೆಂದೇ ಊರವರು, ಸುತ್ತಲಿನ ಹಳ್ಳಿಗಳ ಜನ ಬಂದು ಸೇರಿರುತ್ತಾರೆ. ಜನಪದೀಯವಾಗಿ ಇನ್ನೂ ಹಲವು ವಿಶಿಷ್ಟ ಆಚರಣೆಗಳು(ವೇಷಧಾರಿಗಳಾಗಿ ಎತ್ತುಗಳ ಸಮೂಹದೊಂದಿಗೆ ರೈತರೇ ಹೆಜ್ಜೆ ಹಾಕುವುದು) ಸೇರಿಕೊಂಡಿದ್ದು ಕಾರ ಹುಣ್ಣಿಮೆ ಜನಾಕರ್ಷಣೆ ಹೆಚ್ಚಿಸುವ ಹಬ್ಬವಾಗಿದೆ.