ಬಾಲಕಾರ್ಮಿಕ ನಿವಾರಣೆಗೆ ಜಾಗೃತಿ ಅವಶ್ಯ
ಕನ್ನಡಪ್ರಭ ವಾರ್ತೆ , ಸುರಪುರ , ಜೂ.22
ಬಡತನ, ಅಜ್ಞಾನ, ಹಣದ ವ್ಯಾಮೋಹಕ್ಕಾಗಿ ಪೋಷಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಪ್ರವೃತ್ತಿತೊರೆದಾಗ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯ. ಈ ಕುರಿತಂತೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶಶಿಧರಗೌಡ ಹೇಳಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಿಡಿಪಿಒ, ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರಿವಿರಲಿ: ಹದಿನಾಲ್ಕು ವರ್ಷದ ಒಳಗಿನ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ಪಾರು ಮಾಡಿ, ಅವರಿಗೆ ಸರ್ಕಾರದಿಂದ ಸಿಗುವ ಸೌವಲತ್ತುಗಳನ್ನು ನೀಡಿ ಉತ್ತಮ ಭವಿಷ್ಯ ನೀಡಬೇಕು. ಅಂಗಡಿ, ಗ್ಯಾರೇಜು ಹಾಗೂ ಹೋಟೆಲ್‌ಗಳಲ್ಲಿ ಕೆಲಸದಲ್ಲಿ ತೊಡಗಿದ್ದ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ದೂರ ಮಾಡಿ ಅವರ ಪೋಷಕರೊಂದಿಗೆ ಚರ್ಚಿಸಿ ಸರ್ಕಾರದಿಂದ ಒಳ್ಳೆಯ ವಿದ್ಯಾಭಾಸ ನೀಡಬೇಕು. ಈ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಪ್ಪುಚುಕ್ಕೆ: ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ನಿರ್ದೇಶಕ ರಘುವೀರಸಿಂಗ ಠಾಕೂರ್ ಪ್ರಾಸ್ತಾವಿಕ ಮಾತನಾಡಿ, ಮಕ್ಕಳು ಶಾಲೆಗೆ ಹೋಗದೆ ಬಾಲ ಕಾರ್ಮಿಕರಾಗಿ ರೂಪುಗೊಳ್ಳಲು ಹತ್ತು-ಹಲವಾರು ಕಾರಣಗಳಿರುತ್ತವೆ.
ದೇಶಕ್ಕೆ ಕಪ್ಪುಚುಕ್ಕೆಯಂತಿರುವ ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ಕಾರ್ಮಿಕ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಎನ್.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಮಹ್ಮದ ಹುಸೇನ್ ಮಾತನಾಡಿದರು. ಅಧಿಕಾರಿಗಳಾದ ಥಾಮಸ್ ದೊಡ್ಡಮನಿ, ಬಿ.ಆರ್. ಪೊಲೀಸ್ ಪಾಟೀಲ್, ದೇವಿಂದ್ರ ಹೆಗಡೆ, ವಾಸುದೇವ ಗಂಗೆ, ಹಣಮಂತ ಪಟ್ಟೇದಾರ್, ಚಂದ್ರಕಾಂತ ಕೊಣ್ಣೂರು ಇದ್ದರು. ಬಾಲಕಾರ್ಮಿಕ ಅಧಿಕಾರಿ ಎಂ. ರವೀಂದ್ರ ಸ್ವಾಗತಿಸಿದರು. ರಿಯಾಜ್ ಹುಸೇನ್ ನಿರೂಪಿಸಿದರು. ಖಾಜಾ ಹುಸೇನ್ ವಂದಿಸಿದರು.