ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ರಕ್ತದಾನ ಮಾಡಿ, ಜೀವ ಉಳಿಸಿ'

Vishwanath S
Updated On : 23 Jun 2013, 11:36 am

ಯಾದಗಿರಿ: ಮನುಷ್ಯ ಬದುಕಬೇಕಾದರೆ ರಕ್ತ ಮುಖ್ಯ. ಆದರೆ ಅಪಘಾತದಂಥ ತುರ್ತು ಸಂದರ್ಭದಲ್ಲಿ ಅಗತ್ಯವಿದ್ದವರಿಗೆ ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಿದ ಪುಣ್ಯ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತನೂ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬೇಕೆಂದು ಜಿಲ್ಲಾಧಿಕಾರಿ ಎಫ್. ಆರ್.ಜಮಾದಾರ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಪಂ, ರಾಜ್ಯ ಏಡ್ಸ್ ಪ್ರಿವೆನ್ಷನ್, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ, ಲಯನ್ಸ್ ಕ್ಲಬ್, ರೆಡ್‌ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಮತ್ತು ಬ್ಲಡ್ ಮೊಬೈಲ್ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ: ಆರೋಗ್ಯವಂತ ವ್ಯಕ್ತಿ ರಕ್ತ ಕೊಡುವುದರಿಂದ ಆತನಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮೊದಲು ರಕ್ತವನ್ನು ತಪಾಸಣೆ ಮಾಡಿ, ನಂತರ ದಾನ ಮಾಡಬೇಕು. ಆಗಾಗ ರಕ್ತದಾನ ಮಾಡುವುದರಿಂದ ವ್ಯಕ್ತಿ ಇನ್ನಷ್ಟು ಆರೋಗ್ಯವಂತನಾಗುತ್ತಾನೆ. ಈ ಬಗ್ಗೆ ಜಾಗೃತಿಯ ಕೊರತೆಯಿದೆ. ಆದ್ದರಿಂದ ಅನೇಕರು ರಕ್ತದಾನ ಮಾಡಲು ಮುಂದಕ್ಕೆ ಬರುತ್ತಿಲ್ಲ. ಈ ಬಗ್ಗೆ ಇರುವ ತಪ್ಪು ಕಲ್ಪನೆಗಳು ದೂರವಾಗಬೇಕಿದೆ.  ಜಿಲ್ಲೆಯಲ್ಲಿ ಬ್ಲಡ್ ಮೊಬೈಲ್ ಬಸ್ ವ್ಯವಸ್ಥೆಯನ್ನು ಈಗಾಗಲೇ ಸರ್ಕಾರ ಮಾಡಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಪಂ ಸದಸ್ಯ ಬಸವರಾಜ ಖಂಡ್ರೆ ಮಾತನಾಡಿ, ಇಂದಿನ ದಿನಗಳದಲ್ಲಿ ವಿಜ್ಞಾನದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿದೆ. ಒಬ್ಬ ವ್ಯಕ್ತಿ 90 ದಿನಗಳ ನಂತರ ಮತ್ತೆ ರಕ್ತವನ್ನು ಕೊಡಬಹುದು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು, ಜನರು ಭಯಪಡುವ ಅವಶ್ಯಕತೆ ಇಲ್ಲ. ರಕ್ತವನ್ನು ಕೊಟ್ಟು ಪ್ರಾಣ ಉಳಿಸಲು ಮುಂದಾಗಬೇಕು ಎಂದರು.
ಪ್ರಾಣದಾನ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, ಹೆರಿಗೆ ಸಮಯದಲ್ಲಿ ರಕ್ತಸ್ರಾವ ಆಗುವ ಸಾಧ್ಯತೆಗಳು ಹೆಚ್ಚು. ಆ ಸಂದರ್ಭದಲ್ಲಿ ರಕ್ತದ ತುರ್ತು ಅಗತ್ಯವಿರುತ್ತದೆ. ಇದರಿಂದ ತಾಯಿ ಹಾಗೂ ಮಗುವಿನ ಪ್ರಾಣ ಉಳಿಸಬಹುದು. ನಾವು ಬೇರೊಬ್ಬರಿಗೆ ರಕ್ತವನ್ನು ಕೊಟ್ಟರೆ ಅವರ ಪ್ರಾಣ ಉಳಿಯಬಹುದು ಎಂದು ಹೇಳಿದರು.
 ಇದಕ್ಕೂ ಮುನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ನೋಡಲ್ ಅಧಿಕಾರಿ ಡಾ. ವೆಂಕಟೇಶ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿದ ಜಿಪಂ ಸಿಇಒ ಆಪ್ತಸಹಾಯಕ ಕಿಶನ್, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಟಿ. ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಬ್ಲಡ್ ಮೊಬೈಲ್ ಬಸ್‌ನಲ್ಲಿ  ಕರವೇ ಅಧ್ಯಕ್ಷ ಟಿ.ಎನ್. ಭೀಮುನಾಯಕ್, ಮಹಾದೇವ, ನಾಗರಾಜ, ಅಂಬುರಾಜ ನಾಯಕ್  ರಕ್ತದಾನ ಮಾಡಿದರು. ಜಿಪಂ ಅಧ್ಯಕ್ಷೆ ಮರೆಮ್ಮ ಶಾಣೆನೋರ,  ರಘುನಾಥ ರೆಡ್ಡಿ, ಆರತಿ, ಧನುಶ್ರೀ ಇದ್ದರು. ಡಾ.ಜಿ. ಅಭಯ್ ಕುಮಾರ್ ಸ್ವಾಗತಿಸಿದರು. ಶಿವಾಜಿ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಕಾಶ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement