ವರುಣನ ಅವಕೃಪೆ: ಶೇ.3ರಷ್ಟು ಬಿತ್ತನೆ
ಶಹಾಪುರ: ಜೂನ್ ಮುಗಿಯುತ್ತ ಬಂದರೂ, ತಾಲೂಕಿಗೆ ವರುಣ ಕಾಲಿಟ್ಟಿಲ್ಲ. ಬಿತ್ತನೆ ಅವಧಿ ಮುಗಿಯುತ್ತ ಬಂದರೂ, ಮಳೆಯಿಲ್ಲದ್ದರಿಂದ ರೈತ ಸಮೂಹದಲ್ಲಿ ಆತಂಕ ಮನೆಮಾಡಿದೆ. ತಾಲೂಕಿನಲ್ಲಿ ಇದುವರೆಗೆ ಕೇವಲ ಶೇ.3ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬರಗಾಲದ ಛಾಯೆ ಮತ್ತೊಮ್ಮೆ ಕಾಣಿಸಿಕೊಂಡಿದೆ.
ಮೃಗಶಿರಾ ನಕ್ಷತ್ರದ ಪ್ರವೇಶದ ಸಂದರ್ಭದಲ್ಲಿ ಮುಂಗಾರು ಮಳೆಯ ಲಕ್ಷಣಗಳು ಕಂಡರೂ ದಿನಗಳೆದಂತೆ ಕೇವಲ ಗಾಳಿಯಲ್ಲಿ ಮೋಡಗಳು ಚದುರಿಹೋಗುತ್ತಿವೆ. ಮಳೆ ವಾತಾವರಣವಿಲ್ಲದೇ ರೈತರನ್ನು ಆತಂಕಕ್ಕೆ ದೂಡಿದೆ. ವನದುರ್ಗ, ಹೊಸಕೇರಾ ಇನ್ನಿತರ ನೀರಾವರಿ ಪ್ರದೇಶದದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು, ಮುಂದೆ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ಹತ್ತಿ ಬೀಜ ಊರುವಲ್ಲಿ ರೈತರು ಮಗ್ನರಾಗಿದ್ದಾರೆ. ಮಳೆಯು ಕೈಕೊಟ್ಟು ನಾಲೆಯ ನೀರು ಬರದಿದ್ದರೆ ನಮ್ ಹಣೆಬರಹ ಛಂದ ಇರಾಂಗಿಲ್ಲರಿ ಎಂದು ಹೇಳುವ ರೈತರು, ವರುಣನ ಆಗಮನಕ್ಕೆ ಆಕಾಸದತ್ತ ಮುಖ ಮಾಡಿ ಕಾಯುತ್ತಿದ್ದಾರೆ.
ಬಿತ್ತನೆ ಗುರಿ: ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 95700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಆದರೆ ಈವರೆಗೆ 2905 ಹೆಕ್ಟೇರ್ ಭಾಗದಲ್ಲಿ ಮಾತ್ರ ಬಿತ್ತನೆಯಾಗಿದೆ. ಜೂನ್ ತಿಂಗಳಲ್ಲಿ 40.6 ಮಿಮೀ ಮಳೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 520 ಕ್ವಿಂಟಲ್ ಬಿತ್ತನೆ ಬೀಜದ ಸಂಗ್ರಹವಿದೆ. ಸೂರ್ಯಪಾನ, ಸಜ್ಜೆ, ಮೆಕ್ಕೆಜೋಳ, ಹೆಸರು, ತೊಗರಿಬೀಜ ದಾಸ್ತಾನಿದೆ. ಇನ್ನು ರೈತರಿಗೆ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಬಾರದು ಎನ್ನುವ ದಿಸೆಯಲ್ಲಿ ಶೇ.60ರಷ್ಟು ಸಹಕಾರ ಇಲಾಖೆ ವ್ಯಾಪ್ತಿಗೆ ಮತ್ತು 40 ಪ್ರತಿಶತ ಖಾಸಗಿ ಒಡೆತನದ ಅಂಗಡಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದೋರನಹಳ್ಳಿ, ಗೋಗಿ, ಹೈಯಾಳ, ವಡಿಗೇರಾ ಮತ್ತು ಶಹಾಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಮಾಹಿತಿ ಸಿಗುತ್ತಿದೆ. ಆದರೆ ತುಟ್ಟಿ ಬೀಜ, ಗೊಬ್ಬರ ಖರೀದಿಸಿ ಹೊಲ ಹಸನು ಮಾಡಿ ಕುಳಿತ ರೈತನ ಮೊಗದಲ್ಲಿ ಮಂದಹಾಸವಿಲ್ಲದಂತಾಗಿದೆ.
ಜಾನುವಾರುಗಳ ಬವಣೆ: ಇನ್ನು ರೈತನನ್ನೆ ನಂಬಿಕೊಂಡಿರುವ ಜಾನುವಾರುಗಳಿಗೆ ಅಡವಿಯಲ್ಲಿ ನೀರಿಲ್ಲದೆ, ಹಸಿರು ಮೇವು ಇಲ್ಲದೆ ದಿನಗಳದಂತೆ ಕೃಶವಾಗುತ್ತಿವೆ. ಹಣ ಕೊಟ್ಟರು ಕಣಕಿ ಸಿಗದಂತಾಗಿದೆ. ಮೇವಿನ ಕೇಂದ್ರಗಳ ಹೆಸರಿನಲ್ಲಿ ಸರ್ಕಾರ ಸರಿಯಾದ ಮಾಹಿತಿ ಸಾರ್ವಜನಿಕರಿಗೆ ನೀಡದೆ ಮೇವು ಯಾರ ಪಾಲಾಯಿತೋ ತಿಳಿಯದಂತಾಗಿದೆ. ಸರ್ಕಾರದ ಯೋಜನೆಗಳು ಇದ್ದರೂ ಉಳ್ಳವರ ಪಾಲಾಗುತ್ತಿವೆ.
ಹಿಂದಿನ ವರ್ಷವೇ ಸಕಾಲದಲ್ಲಿ ಮಳೆಬಾರದೇ ಮತ್ತೊಂದಡೆ ನೀರಾವರಿ ಬೆಳೆ ಬೆಳೆಯಲು ಸರ್ಕಾರ ಒಂದೇ ಬೆಳೆಗೆ ಸೀಮಿತಮಾಡಿದ್ದು ರೈತ ಸಂಕಷ್ಟ ಎದುರಿಸುತ್ತಿದ್ದಾನೆ. ಜನಪ್ರತಿನಿಧಿಗಳು ಮತ್ತು ಕೃಷಿ ಇಲಾಖೆ ತಾಲೂಕಿನಲ್ಲಿ ಮುಂಗಾರು ಹಂಗಾಮುವಿನ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಈ ಭಾಗದ ರೈತಾಪಿ ವರ್ಗದ ಹಿತ ಕಾಪಾಡಲು ಮುಂದಾಗಬೇಕಿದೆ. ಜಾನುವಾರುಗಳನ್ನು ಮೇವಿನ ಬವಣೆಯಿಂದ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.