ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಐಪಿ ಊರು.. ಅಶುದ್ಧ ನೀರು

Vishwanath S
Updated On : 23 Jun 2013, 11:33 am

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಜೂ.22
ಇದು ಜೇವರ್ಗಿ ತಾಲೂಕಿನ ಭೀಮಾ ತೀರದ ವಿವಿಐಪಿ ಊರೆಂದೇ ಹೆಸರಾಗಿರುವ ನೆಲೋಗಿಯನ್ನು ಕಾಡುತ್ತಿರುವ ಅಶುದ್ಧ ಕುಡಿಯುವ ನೀರಿನ ಕಥೆ- ವ್ಯಥೆ.
ನೆಲೋಗಿ ಮಾಜಿ ಸಿಎಂ, ಪ್ರಸ್ತುತ ಬೀದರ್ ಸಂಸದ ಧರಂಸಿಂಗ್ ತವರೂರು. ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ನೆಲೋಗಿಯವರೇ. ಹೀಗಾಗಿ ಇದಕ್ಕೆ ವಿವಿಐಪಿ ಊರೆಂಬ ಅಡ್ಡನಾಮವಿದೆ.
ಕಳೆದ ತಿಂಗಳಷ್ಟೆ ಕರಳುಬೇನೆ, ಕಾಲರಾ, ಟೈಫಾಯ್ಡ್ ಈ ಊರಿನ ಜನರನ್ನು ತಿಕ್ಕಿಮುಕ್ಕಿತ್ತು. ಕಾರಣ ಶೋಧಿಸಿದಾಗ ನಲ್ಲಿಗಳಲ್ಲಿ ಹರಿದು ಬರುತ್ತಿರುವ ಭೀಮಾ ನದಿಯ ಅಶುದ್ಧ ನೀರು ಎಂಬಂಶ ಹೊರಬಿದ್ದಾಗಲೇ ವಿವಿಐಪಿಗಳಿಗೆ ನೆಲೋಗಿ ನಲ್ಲಿಗಳಲ್ಲಿ ಕೊಳಕು ನೀರು ಪೂರೈಕೆಯಾಗುತ್ತಿದೆ ಎಂಬಂಶ ಗಮನಕ್ಕೆ ಬಂತು. ಶುದ್ಧೀಕರಿಸದೆಯೇ ನೆಲೋಗಿ ಊರಿಗೆ ಭೀಮೆಯ ನೀರು ಪೂರೈಕೆಯಾಗುವುದೇ ಸಮಸ್ಯೆಯ ಮೂಲ.
ಕೆಡಿಪಿ ಸಭೆಯಲ್ಲೂ ಗರಂ ಚರ್ಚೆ: ನೆಲೋಗಿಗೆ ಪೂರೈಕೆಯಾಗುವ ಅಶುದ್ಧ ನೀರಿನ ಬಗ್ಗೆ ಸಚಿವ ಖಮರುಲ್ ಇಸ್ಲಾಂ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲೂ ಚರ್ಚೆಯಾಯ್ತು. ಎಂಎಲ್‌ಸಿ ಅಲ್ಲಂಪ್ರಭು ಸಮಸ್ಯೆಯನ್ನು ಚರ್ಚೆಗೆಳೆದು ಅನುದಾನ ದುರ್ಬಳಕೆಯಾಗಿದೆ ಎಂದು ದೂರಿದಾಗ ಜಿಪಂ ಎಂಜಿನಿಯರ್ ಭೀಮಕ್ಕನವರ್ 10 ಲಕ್ಷ ಅಂದಾಜಿನಲ್ಲೇ ಯೋಜನೆ ರೂಪಿಸಲಾಗಿದೆ.  ಶುದ್ಧೀಕರಣ ಘಟಕ ಇತ್ಯಾದಿ ಕಾಮಗಾರಿಗಳಿಗೆ ಹೆಚ್ಚಿನ ಹಣ ಬೇಕು ಎಂದು ನೀಡಿದ ವಿವರಣೆಗೆ ಪ್ರತಿಯಾಗಿ ಯೋಜನೆ ಅರ್ಧಮರ್ಧ ಎಂಬುದು ಅರಿವಿದ್ದರೂ ತಾಂತ್ರಿಕ ಪರವಾನಗಿ, ಆಡಳಿತಾತ್ಮಕ ಒಪ್ಪಿಗೆ ದೊರಕಿತು ಹೇಗೆ? ಇದನ್ನು ಕೊಟ್ಟವರು ಯಾರು ಎಂಬ ಪ್ರಶ್ನೆ ಉದ್ಭವವಾಯ್ತಷ್ಟೆ.
ಮತ್ತೆ 50 ಲಕ್ಷ ಹೊಸ ಯೋಜನೆ ಟೆಂಡರ್: ನೆಲೋಗಿ ಊರಿಗೆ ಮತ್ತೆ 50 ಲಕ್ಷ ವೆಚ್ಚದಲ್ಲಿ ಹೊಸ ಯೋಜನೆ ರೂಪಿತವಾಗಿದೆ. ಅದೀಗ ಟೆಂಡರ್ ಹಂತದಲ್ಲಿದೆ ಎಂದು ಕೆಡಿಪಿ ಸಭೆಯಲ್ಲೇ ಎಂಜಿನಿಯರ್ ಭೀಮಕ್ಕನವರ್ ವಿವರಿಸಿದ್ದಾರೆ. ಈ ಹಣವಾದರೂ ಸದ್ಬಳಕೆಯಾಗಿ ಸಮಸ್ಯೆ ಇನ್ನಿಲ್ಲದಂತೆ ಪರಿಹರಿಸುವುದೇ ಕಾದು ನೋಡಬೇಕಷ್ಟೆ.
ಡಾ. ಅಜಯ್ ಮೌನ: ಶಾಸಕರಾದ ನಂತರ ಜೇವರ್ಗಿ ತಾಲೂಕಿನ ಗ್ರಾಮಗಳ ನೀರಿನ ಬವಣೆ ನೀಗಿಸಿ ಎಂದು ಡಿಸಿ ಮನವಿ ಸಲ್ಲಿಸಿದ್ದು ಹೊರತುಪಡಿಸಿದಲ್ಲಿ ತಮ್ಮೂರು ನೆಲೋಗಿಯ ನೀರಿನ ಸಮಸ್ಯೆ, ಅಲ್ಲಿನ ಶುದ್ಧೀಕರಣ ಘಟಕದ ವಿಚಾರಗಳ ಬಗ್ಗೆ ಡಾ.ಅಜಯ್ ಇನ್ನೂ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ.
ಇದೀಗ ಕಳೆದೆರಡು ದಿನಗಳಿಂದ ಜೇವರ್ಗಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸುತ್ತಿರುವ ಡಾ. ಅಜಯ್ ಈ ಸಂದರ್ಭದಲ್ಲಾದರೂ ನೆಲೋಗಿ ಊರಿನ ಅಶುದ್ಧ ನೀರಿನ ಸಮಸ್ಯೆಗೆ ಸ್ಪಂದಿಸಲಿ ಎಂದು ಜನತೆ ಇದಿರು ನೋಡುತ್ತಿದ್ದಾರೆ.
ರಸಾಯನಯುಕ್ತ ನೀರಿರುವ ಜಲಮೂಲಗಳಿಂದ ಬರುವ ನೀರನ್ನು ಶುದ್ಧೀಕರಿಸಲು ಜಿಪಂ ಅಳವಡಿಸುತ್ತಿರುವ ರಿವರ್ಸ್ ಆಸ್ಮೋಸಿಸ್ ಘಟಕವನ್ನು ನೆಲೋಗಿಗೆ ಮಂಜೂರು ಮಾಡಲಾಗಿದೆ. ಈಗಾಗಲೇ 16 ಲಕ್ಷ ವೆಚ್ಚದ ಘಟಕ ಇಲ್ಲಿ ಅಳವಡಿಕೆಯಾಗಿದೆ.
- ಶೋಭಾ ಬಾಣಿ, ಜಿಪಂ ಸದಸ್ಯರು, ನೆಲೋಗಿ ಕ್ಷೇತ್ರ, ಜೇವರ್ಗಿ

ಅನುದಾನದಲ್ಲಿನ 10 ಲಕ್ಷವೂ ಗುಳುಂ, ನೀರು ಹರಿಯುತ್ತಿಲ್ಲ ಎಂದರೆ ಹೇಗೆ? ಮಾಜಿ ಸಿಎಂ, ಶಾಸಕರು, ಎಂಎಲ್‌ಸಿಗಳ ಊರಲ್ಲೇ ಹೀಗಾಗುತ್ತದೆ ಎಂದರೆ ಸಾಮಾನ್ಯ ಜನತೆ ಏನಂದುಕೊಳ್ಳಲಿಕಿಲ್ಲ?
- ಅಲ್ಲಂಪ್ರಭು ಪಾಟೀಲ್, ಎಂಎಲ್‌ಸಿ (ಕೆಡಿಪಿ ಸಭೆಯಲ್ಲಿ)
ಎಂಎಲ್‌ಸಿ ಅನುದಾನದಿಂದ 10 ಲಕ್ಷ ಬಂದದ್ದು ನಿಜ. ಇದರಲ್ಲಿ ನೆಲೋಗಿಗೆ ನೀರು ಪೂರೈಕೆ ಯೋಜನೆ ರೂಪಿಸಿದ್ದೇವೆ. ಅದರಲ್ಲಿ ಅಶುದ್ಧ ನೀರಿನ ಶುದ್ದೀಕರಣಕ್ಕೆ ಒತ್ತು ನೀಡಲಾಗಿಲ್ಲ. ಅದಕ್ಕೆ ಹೆಚ್ಚಿನ ಖರ್ಚು ಇದೆ.
- ಭೀಮಕ್ಕನವರ್, ಎಇ, ಜಿಪಂ ಎಂಜಿನಿಯರಿಂಗ್ ವಿಭಾಗ

-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement