ಕೇಂದ್ರದಿಂದ 6 ಸಾವಿರ ಲಕ್ಷ ಕೋಟಿ ಭ್ರಷ್ಟಾಚಾರ
ಕನ್ನಡಪ್ರಭ ವಾರ್ತೆ , ಸಿಂಧನೂರು , ಜೂ.23
ಕೇಂದ್ರದ ಯುಪಿಎ ಸರ್ಕಾರ 6 ಸಾವಿರ ಲಕ್ಷ ಕೋಟಿ ಭ್ರಷ್ಟಾಚಾರ ಮಾಡಿದೆ ಎಂದು ಕೊಪ್ಪಳ ಸಂಸದ ಶಿವರಾಮೇಗೌಡ ಆರೋಪಿಸಿದರು.
ನಗರದ ಸತ್ಯ ಗಾರ್ಡನ್ನಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆ ಹಾಗೂ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಕಲ್ಲಿದ್ದಲು, ಹೆಲಿಕಾಪ್ಟರ್, 2ಜಿ ತರಂಗಾತರ, ಒಲಂಪಿಕ್ಸ್ ಕ್ರೀಡಾಕೂಟ ಮತ್ತಿತರ ಹಗರಣಗಳನ್ನು ನಡೆಸಿ ಜನವಿರೋಧಿಯಾಗಿದೆ. ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಆರಂಭದಲ್ಲೇ ಎಡವಿದೆ. ಸಾರಾಯಿ, ಲಿಕ್ಕರ್ ಮುಕ್ತವಾಗಿ ಮಾರಾಟ ಮಾಡುವ ಮೂಲಕ ಇಡೀ ರಾಜ್ಯವನ್ನೇ ನಶೆಯಲ್ಲಿ ಮುಳುಗಿಸುವ ಕೆಲಸ ಮಾಡುತ್ತಿದೆ. ಎಪಿಎಲ್, ಬಿಪಿಎಲ್ ಕಾರ್ಡ್ದಾರರಿಗೆ ವ್ಯತ್ಯಾಸ ಮಾಡುತ್ತಾ ಅಗ್ಗದ ಅಕ್ಕಿ ಕೊಡುವ ನೆಪದಲ್ಲಿ ಜನರನ್ನು ಸೋಮಾರಿಗಳನ್ನಾಗಿ ಮಾಡಿ ಅಗ್ಗದ ಸಾರಾಯಿ ಕೊಟ್ಟು ಮನೆಯಲ್ಲಿ ಮಲಗಿಸಲು ಹೊರಟಿದೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ- ವಿಶ್ವಾಸ: ಪುರಸಭೆ, ನಗರಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋತಿದ್ದರೂ ರಾಷ್ಟ್ರದಲ್ಲಿ ಈಗ ಬಿಜೆಪಿಗೆ ಹೊಸ ಅಲೆ ಸೃಷ್ಟಿಯಾಗಿದೆ. ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ನೇಮಕ ಮಾಡಿದ ಮೇಲೆ ಯುವ ಸಮೂಹ ಬಿಜೆಪಿಯ ಕಡೆ ವಾಲುತ್ತಿದೆ. ರಾಷ್ಟ್ರದ ನಾಯಕತ್ವವನ್ನು ಮೋದಿ ಕೈಗೆ ನೀಡಲು ಮುಂದಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಸಹ ಮೋದಿ ಪರ ಮಾತನಾಡುತ್ತಿದ್ದಾರೆ. ಅವರಿಂದ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಿವರಾಮೇಗೌಡ ಭವಿಷ್ಯ ನುಡಿದರು.
ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ, ರಾಜಕಾರಣ ಪಗಡೆಯಾಟವಿದ್ದಂತೆ. ಬಿಜೆಪಿಯಲ್ಲಿ ಹಿರಿಯರ ಒಳಜಗಳ, ಪರಸ್ಪರ ಮುನಿಸು, ಆರೋಪಗಳಿಂದಾಗಿ ಪಕ್ಷ ಈ ಬಾರಿ ನಡೆದ ಚುನಾವಣೆಯಲ್ಲಿ ನೆಲೆ ಕಳೆದುಕೊಂಡಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ದೂರದರ್ಶನ ನೋಡುತ್ತಿದ್ದ ಗೃಹಿಣಿಯರು ಮುಖಂಡರ ಒಳಜಗಳ ನೋಡಿ ಬೇಸತ್ತು ಬಿಜೆಪಿ ವಿರುದ್ಧ ಮತ ಹಾಕಲು ನಿರ್ಧರಿಸಿದರು. ಅಂದೇ ನಮ್ಮ ಪಕ್ಷದ ಸೋಲು ಖಚಿತವೆಂದು ನಿರ್ಣಯಿಸಲಾಗಿತ್ತು ಎಂದು ಹೇಳಿದರು.
ಪಾಠ ಕಲಿತಿದ್ದೇವೆ: ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ ಮಾತನಾಡಿ, ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಬೆನ್ನೆಲುಬು. ಕಾರ್ಯಕರ್ತರ ನೋವು- ನಲಿವುಗಳಿಗೆ ಪಕ್ಷ ಸ್ಪಂದಿಸುತ್ತದೆ. ಹಿಂದಿನ ಒಳಜಗಳ, ಅಧಿಕಾರಕ್ಕಾಗಿ ಕಚ್ಚಾಟದಿಂದ ಎಲ್ಲರೂ ಪಾಠ ಕಲಿತಿದ್ದೇವೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲರೂ ಈಗಿನಿಂದಲೇ ಒಗ್ಗಟ್ಟಾಗಿ ಶ್ರಮಿಸಬೇಕು. ಪಕ್ಷದ ಗೆಲವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಮಾಜಿ ಎಂಎಲ್ಸಿ ಹಾಲಪ್ಪ ಆಚಾರ್, ಪಕ್ಷದ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವನಗೌಡ ಗೊರೇಬಾಳ ಮಾತನಾಡಿದರು.
ಜಿಪಂ ಸದಸ್ಯರಾದ ಸರೋಜಮ್ಮ ಬಸವರಾಜ, ಪಿಳ್ಳಿ ಕೊಂಡಯ್ಯ, ತಾಪಂ ಸದಸ್ಯ ಕಲ್ಲೂರ ಬಸನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಡೇಶ ವಲ್ಕಂದಿನ್ನಿ, ಉಮೇಶ ಸಜ್ಜನ ಇದ್ದರು.
ಮುಖಂಡರಾದ ದೇವೆಂದ್ರಪ್ಪ ಯಾಪಲಪರ್ವಿ, ಕಲ್ಲೂರ ಬಸಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರನ್ನು ಸನ್ಮಾನಿಸಿದರು.
ಶ್ರದ್ಧಾಂಜಲಿ: ಇದಕ್ಕೂ ಮುನ್ನ ಛತ್ತೀಸಗಡದಲ್ಲಿ ನಕ್ಸಲ್ ಹಾವಳಿಯಲ್ಲಿ ಮರಣ ಹೊಂದಿದ, ಉತ್ತರಖಂಡದಲ್ಲಿ ಮೇಘ ಸ್ಫೋಟದಿಂದ ಮೃತರಾದವರಿಗೆ, ಬಳ್ಳಾರಿ ಪ್ರಾಂತೀಯ ಆರೆಸ್ಸೆಸ್ ಮುಖಂಡ ಗಣೇಶ ಕಾರಂತ್ ಅವರು ಅಪಘಾತದಲ್ಲಿ ನಿಧನ ಹೊಂದಿದ ಪ್ರಯುಕ್ತ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.