ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುತ್ತಿಗೆದಾರರಿಗೆ ಗಡುವು ನೀಡಲು ಸೂಚನೆ

Vishwanath S
Updated On : 24 Jun 2013, 11:27 am

ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದಲ್ಲಿ ಎಡಿಬಿ, ಎಸ್‌ಎಫ್‌ಸಿ, 13ನೇ ಹಣಕಾಸು ಯೋಜನೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ನಿಗಾ ವಹಿಸಬೇಕು. ಗುತ್ತಿಗೆದಾರರಿಗೆ ಸಮಯ ಗಡುವು ನೀಡಿ, ಸಮರ್ಪಕ ಕಾರ್ಯ ನಿರ್ವಹಿಸದೆ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಶಾಸಕ ಜಿ. ರಾಮಕೃಷ್ಣ ಅಧಿಕಾರಿಗಳಿಗೆ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರ ಅಭಿವೃದ್ಧಿ, ಕಾಮಗಾರಿ ಕುರಿತು ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಿಲ್ಲು ಪಾವತಿ ವಿಳಂಬ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಎಡಿಬಿ ಯೋಜನೆ ಕುರಿತು ವಿವರಣೆ ನೀಡಿದ ಕೆಯುಎಡಿಎಫ್‌ಸಿಐ ಕಾರ್ಯನಿರ್ವಾಹಕ ಸಹಾಯಕ ಅಭಿಯಂತರಾದ ರಂಗಯ್ಯ ಬಡಿಗೇರ, ಕಾಮಗಾರಿ ಇನ್ನೂ ಶೇ.30 ರಷ್ಟು ಉಳಿದಿದ್ದು, ಬಿಲ್ಲು ಪಾವತಿ ವಿಳಂಬದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.
ಒಟ್ಟು 54 ಕಿ.ಮೀ. ಪೈಪ್‌ಲೈನ್ ಅಳವಡಿಸುವ ಯೋಜನೆ ಇದ್ದು, ಇದರಲ್ಲಿ 14 ಕಿ.ಮೀ. ಬಾಕಿ ಇದೆ. 24/7 ನೀರು ಸರಬರಾಜು ಯೋಜನೆಯಲ್ಲಿ ಮನೆಮನೆಗೆ ಪೈಪ್‌ಲೈನ್ ಜೋಡಿಸಲು ತಾಂತ್ರಕ ಒಪ್ಪಿಗೆ ನೀಡಲಾಗಿದೆ. ನೀರು ಶುದ್ಧೀಕರಣ ಘಟಕ ಇನ್ನೂ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ.ಎ. ರಶೀದ್ ಅವರು ಮುಖ್ಯಮಂತ್ರಿಗಳ ನಿಧಿಯಿಂದ ಮಂಜೂರಾದ 15 ಕೋಟಿ ಯೋಜನೆ ಕುರಿತು ಗಮನ ಸೆಳೆದರು. ಈ ಕುರಿತು ವಿವರಣೆ ನೀಡಿದ ಪ್ರಭಾರಿ ಪೌರಾಯುಕ್ತ 15 ಕೋಟಿ ಯೋಜನೆ ಸಿದ್ದವಾಗಿದ್ದು, ರಸ್ತೆ, ಚರಂಡಿ ನಿರ್ಮಾಣಕ್ಕೆ ಇ-ಟೆಂಡರ್ ಕರೆಯಲಾಗುವುದು ಎಂದು ವಿವರಿಸಿದರು.
ಸೂಕ್ತ ಕ್ರಮದ ಎಚ್ಚರಿಕೆ: ಶಾಸಕ ಜಿ. ರಾಮಕೃಷ್ಣರವರು ಯೋಜನೆಗಳ ಬಗ್ಗೆ ಸೂಕ್ತ ನಿಗಾ ವಹಿಸಿ, ಪ್ರತಿ ಕಾಮಗಾರಿಗೆ ಸಮಯದ ನಿರ್ಭಂದವಿರಲಿ, ಇದಕ್ಕೆ ತಪ್ಪಿದರೆ ಸೂಕ್ತ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳ ಸಣ್ಣ, ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ 55 ಕಾಮಗಾರಿ ಕೈಗೊಂಡಿದ್ದು, ಇವುಗಳಲ್ಲಿ 3 ಕಾಮಗಾರಿಗಳು ಟೆಂಡರ್ ಹಂತದಲ್ಲಿದೆ ಎಂದು ಪೌರಾಯುಕ್ತರು ವಿವರಿಸಿದರು.
ಕಾಂಗ್ರೆಸ್ ಮುಖಂಡ ಮಹಿಬೂಬ್ ಮಸಾಲೆವಾಲೆ ಚರಂಡಿ ನಿರ್ಮಾಣದಿಂದ ಬಂದ ತ್ಯಾಜ್ಯ ಭಾಂಡಿ ಬಜಾರ, ಲೋಹಾರಗಲ್ಲಿ ರಸ್ತೆಯಲ್ಲಿ ಬಿದ್ದಿದ್ದು, ಅದನ್ನು ಸ್ವಚ್ಛಗೊಳಿಸುವ ಕುರಿತು ಶಾಸಕರ ಗಮನಕ್ಕೆ ತಂದರು.
ತ್ವರಿತ ಕ್ರಮಕ್ಕೆ ಆದೇಶ: ನಗರಸಭೆ ಸದಸ್ಯರಾದ ಡಾ. ಅಹ್ಮದ್ ಪಟೇಲ್, ಸೂರ್ಯಕಾಂತ ಕೋಬಾಳ, ಮಲ್ಲಿಕಾರ್ಜುನ ಜಲಂಧರವರು ನಗರದ ಪ್ರಮುಖ ವೃತ್ತದಲ್ಲಿ ಕೆಟ್ಟು ನಿಂತ ಹೈಮಾನ್ಸ್, ಆಟದ ಮೈದಾನ ನಿರ್ಮಾಣ, ಗುಡಿಸಲು ವಾಸಿಗಳಿಗೆ ಆಶ್ರಯ ನಿವೇಶನ ಹಂಚುವ ಕುರಿತು ಶಾಸಕರ ಗಮನಕ್ಕೆ ತಂದರು. ಶಾಸಕರು ಈ ಬಗ್ಗೆ ತ್ವರಿತ ಕ್ರಮಕ್ಕೆ ಆದೇಶಿಸಿದರು.
ವಾರ್ಡ್ 11,12,13ರಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಬರಪರಿಹಾರ ನಿಧಿಯಿಂದ ಕೊಳವೆ ಬಾವಿ ತೊಡಿಸಬೇಕೆಂದು ಸದಸ್ಯ ಕುಮಾರ ಚವ್ಹಾಣ ಆಗ್ರಹಿಸಿದರು. ಕಾಮಗಾರಿಗಳ ಕುರಿತು ಸೂಚನ ಫಲಕ ಹಾಕಲು, ಎಲ್ಲ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲು ಶಾಸಕರು ಆದೇಶಿಸಿದರು.
ಕಾಂಗ್ರೆಸ್ ಮುಖಂಡರಾದ ಶಿವಾನಂದ ಪಾಟೀಲ್, ಸಂತೋಷಕುಮಾರ ಇಂಗಿನಶೆಟ್ಟಿ, ಅಜೀತಕುಮಾರ ಪಾಟೀಲ್, ನಿಂಗಣ್ಣ ದೇವಕರ್, ಶಿವರಾಜ ಕೋರೆ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement