ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜನತೆಯ ವಿರೋಧಕ್ಕೆ ಸಿಕ್ಕ ಜಯ

Vishwanath S
Updated On : 24 Jun 2013, 11:30 am

ಗುಲ್ಬರ್ಗ: ಮದ್ಯ ಮಾರಾಟ ಅಂಗಡಿಗಳಿಗೆ(ವೈನ್‌ಶಾಪ್)ಗಳಿಗೆ ಹೊಸದಾಗಿ ಪರವಾನಗಿ ನೀಡಬೇಕೆನ್ನುವ ಪ್ರಸ್ತಾಪವನ್ನು ಸರ್ಕಾರವು ತಾತ್ಕಾಲಿಕವಾಗಿ ಮುಂದೂಡಿರುವ ನಿರ್ಧಾರವು ಜನತೆಯ ತೀವ್ರ ವಿರೋಧಕ್ಕೆ ಸಿಕ್ಕ ಜಯ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂ ಎಸ್‌ಎಸ್) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ) ಗುಲ್ಬರ್ಗ ಜಿಲ್ಲಾ ಸಮಿತಿಗಳು ಅಭಿಪ್ರಾಯಪಟ್ಟಿವೆ. ಪರವಾನಗಿ ನೀಡುವ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಿ, ನಂತರ ಮತ್ತೇ ಅದನ್ನು ಮಾಡಲು ಹೋದರೆ ಜನರ ವಿರೋಧಕ್ಕೆ ಸರ್ಕಾರವು ಗುರಿಯಾಗಬೇಕಾಗುತ್ತದೆ. ಆದ್ದರಿಂದ ಈ ಪ್ರಸ್ತಾಪವನ್ನು ಸಂಪೂರ್ಣ ಕೈಬಿಡಬೇಕೆಂದು ಮಹೇಶ ನಾಡಗೌಡ ಮತ್ತು ಡಾ. ಸೀಮಾ ದೇಶಪಾಂಡೆ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಶ್ರೀರಾಮ ಫೈನಾನ್ಸ್ ಉದ್ಘಾಟನೆ
ಸೇಡಂ: ಶ್ರೀರಾಮ ಕಮರ್ಷಿಯಲ್ ವೆಹಿಕಲ್ ಫೈನಾನ್ಸ್‌ನ 65ನೇ ಘಟಕವನ್ನು ಇಲ್ಲಿನ ಪಾಟೀಲ್ ಮತ್ತು ಪಾಟೀಲ್ ಸಂಕೀರ್ಣದಲ್ಲಿ ಬುಧವಾರ ಮುಖ್ಯಸ್ಥ ಅಶೋಕಸಿಂಗ್ ಹಜೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉದಯ ಎಂ. ಚನ್ನಾವರ್, ವಿಜಯಕುಮಾರ ರಾಜಾಪುರ, ವಿರುಪಾಕ್ಷ ಜಿ. ಹಿರೇಮಠ, ಮೌನೇಶ ಪೂಜಾರಿ, ವಿ.ಬಿ. ಕೊಲ್ವಿ, ಸಂತೋಷ ಸವಲಗಿ ಮಠ, ಸುನೀಲ್ ಸದಾರೆ, ವಿನಯ ಚನ್ನಾವರ್ ಇದ್ದರು.

ಹೋಬಳಿ ಮಟ್ಟದಲ್ಲಿ ಪಹಣಿ ಲಭ್ಯ: ಗೋಠೆ
ಜೇವರ್ಗಿ: ರೈತರ ಅನುಕೂಲಕ್ಕಾಗಿ ಶನಿವಾರದಿಂದ ತಾಲೂಕಿನ ಹೋಬಳಿ ಮಟ್ಟದಲ್ಲಿಯೂ ಪಹಣಿ ವಿತರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಎಂ.ಎನ್. ಗೋಠೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಾಲೂಕಿನ ಹೋಬಳಿ ಮಟ್ಟದ ಗ್ರಾಮಗಳಾದ ಇಜೇರಿ, ಆಂದೋಲಾ, ಯಡ್ರಾಮಿ, ನೆಲೋಗಿ, ಜೇವರ್ಗಿಗಳಲ್ಲಿ ಪಹಣಿ ವಿತರಿಸಲಾಗುತ್ತಿದ್ದು, ರೈತರು ತಮ್ಮ ವ್ಯಾಪ್ತಿಯಡಿ ಬರುವ ಹೋಬಳಿ ಮಟ್ಟದ ಗ್ರಾಮಗಳಲ್ಲಿ ಪಹಣಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೇನಾ ಭರ್ತಿ ರ್ಯಾಲಿ ಮುಂದೂಡಿಕೆ
ಗುಲ್ಬರ್ಗ: ಗುಲ್ಬರ್ಗ, ಬೀದರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಯುವಕರಿಗೆ ಜುಲೈ 3 ರಿಂದ 10ರವರೆಗೆ ಚಿಕ್ಕಮಗಳೂರಿನ ಸೆಂಟಿನರಿ ಸ್ಟೇಡಿಯಂ (ಮೈದಾನ)ದಲ್ಲಿ ಏರ್ಪಡಿಸಿದ್ದ ಸೇನಾಭರ್ತಿ ನೇಮಕಾತಿ ರ್ಯಾಲಿಯನ್ನು ಹವಾಮಾನ ವೈಪರೀತ್ಯದಿಂದ ಮುಂದೂಡಲಾಗಿದೆ ಎಂದು ಸೇನಾ ಭರ್ತಿ ರ್ಯಾಲಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯೋಗಿನಿ ಯೋಜನೆ: ಸಾಲಕ್ಕಾಗಿ ಅರ್ಜಿ
ಗುಲ್ಬರ್ಗ:  ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ನಿರುದ್ಯೋಗಿ ಮಹಿಳೆಯರಿಗೆ ನೇರವಾಗಿ ಸ್ವಂತ ಉದ್ಯಮ ಮತ್ತು ಸೇವಾ ಕ್ಷೇತ್ರ ಪ್ರಾರಂಭಿಸಲು ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಮಹಿಳಾ ಅಭ್ಯರ್ಥಿಗಳಿಂದ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಕಡುಬಡವರು,  ಸಂಕಷ್ಟ ಪರಿಸ್ಥಿತಿಯಲ್ಲಿರುವ, ಅಂಗವಿಕಲ ಮಹಿಳೆಯರು ಮತ್ತು ವಿಧವೆಯರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.ಅರ್ಜಿದಾರಳು ಈ ಹಿಂದೆ ಯಾವುದೇ ಇಲಾಖೆಗಳಿಂದ ಅಥವಾ ನಿಗಮಗಳಿಂದ ಅಥವಾ ಕೋ-ಆಪರೇಟಿವ್ ಸೋಸೈಟಿಗಳಿಂದ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಿಂದಾಗಲಿ ಸಾಲ ಪಡೆದಿರಬಾರದು. ಈ ಯೋಜನೆಯಡಿ ಅರ್ಜಿ ಸಲ್ಲಿಸುವವರ ವಯಸ್ಸು 18ರ ಮೇಲ್ಪಟ್ಟು ಹಾಗೂ 45 ವಯಸ್ಸಿನೊಳಗಿರಬೇಕು. ವಾರ್ಷಿಕ ಆದಾಯ ರು. 40 ಸಾವಿರ ಮೀರಿರಬಾರದು. ಇದರಲ್ಲಿ ಕಡುಬಡವರು, ಸಂಕಷ್ಟ ಸ್ಥಿತಿಯಲ್ಲಿರುವವರಿಗೆ ಹಾಗೂ ಅಂಗವಿಕಲ ಮಹಿಳೆಯರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಜುಲೈ 15ರೊಳಗಾಗಿ ಸಲ್ಲಿಸಬೇಕು.

ಕಾರು ಬಾಡಿಗೆ: ದರಪಟ್ಟಿ ಆಹ್ವಾನ
ಗುಲ್ಬರ್ಗ: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಗೆ ಹೊಸ ಟಾಟಾ ಇಂಡಿಗೋ, ಟಾಟಾ ವಿಕ್ಟಾ ಎ.ಸಿ.ಯೊಂದಿಗೆ ಮಾಸಿಕ ಬಾಡಿಗೆ ರು. 30 ಸಾವಿರ ಆಧಾರದ ಮೇಲೆ ಜೂ. 2013 ರಿಂದ ಮಾರ್ಚ 2014ರವರೆಗೆ ಬೇಕಾಗಿದೆ. ಇಚ್ಚೆಯುಳ್ಳ ಖಾಸಗಿ ಟ್ರಾವಲ್ ಏಜೇನ್ಸಿಯವರು ಜು. 30ರ ಸಂಜೆ 4 ಗಂಟೆಯೊಳಗೆ ಸಹನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಗುಲ್ಬರ್ಗ ಇವರಿಗೆ ಸೀಲ್ ಮಾಡಿದ ಟೆಂಡರ್ ಸಲ್ಲಿಸಬೇಕು. ಅದೇ ದಿನವೇ ಟೆಂಡರ್‌ನ್ನು ಎಲ್ಲರ ಸಮ್ಮುಖದಲ್ಲಿ ತೆರೆಯಲಾಗುವುದು. ಹೆಚ್ಚಿನ ವಿವರಗಳಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಅಕ್ರಮ ಕಳ್ಳಭಟ್ಟಿ ತಯಾರಿಕೆ ತಡೆಗೆ ಕರವೇ ಆಗ್ರಹ
ಚಿತ್ತಾಪುರ: ತಾಲೂಕಿನ ಬೆಳಗೇರಾ ಹಾಗೂ ಸುತ್ತಮುತ್ತಲಿನ ತಾಂಡಾಗಳಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವಲಯ ಘಟಕ ಅಧ್ಯಕ್ಷ ಮಹಾದೇವ ತೆಲಗೂರ ಆಗ್ರಹಿಸಿದ್ದಾರೆ. ತಾಲೂಕಿನ ಅಬಕಾರಿ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ತಾಲೂಕಿನ ಬೆಳಗೇರಾ ಮತ್ತು ಸುತ್ತಲಿನ ತಾಂಡಾಗಳಲ್ಲಿನ ಜನರು ಅಕ್ರಮವಾಗಿ ತಮ್ಮ ಮನೆಗಳಲ್ಲಿ ಹಾಗೂ ಹೊಲಗಳಲ್ಲಿ ಸಾರಾಯಿ ತಯಾರಿಸಿ ರಾಜಾರೋಷವಾಗಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಇದು ಕಳಪೆ ಮಟ್ಟದ ಸಾರಾಯಿ ಇದ್ದು, ಇದು ಸೇವಿಸಿದರೆ ಮನುಷ್ಯನ ಆರೋಗ್ಯ ಕೆಟ್ಟು ರೋಗಗಳಿಗೆ ತುತ್ತಾಗುವ ಭೀತಿಯಿದೆ. ಹಲವಾರು ದಿನಗಳಿಂದ ಯಾರ ಭಯವಿಲ್ಲದೆ ಕೆಲವರು ಇಂಥ ದಂಧೆಯಲ್ಲಿ ತೊಡಗಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ತಯಾರಿಕೆ ಮಾಡಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ಈ ದಂಧೆಯಲ್ಲಿ ಅಬಕಾರಿ ಹಾಗೂ ಪೊಲೀಸರು ಶಾಮೀಲಾಗಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಅವರು ಆರೋಪಿಸಿದರು. ಕಳ್ಳಭಟ್ಟಿ ತಯಾರಕರ ವಿರುದ್ಧ ಹಲವಾರು ಬಾರಿ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಎಚ್ಚೆತ್ತುಕೊಂಡು ತಯಾರಿಕೆ ಹಾಗೂ ಮಾರಾಟ ಮಾಡುವವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಮಕ್ಕೆ ವಿಳಂಬ ಮಾಡಿದಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

'ರೇಷ್ಮೆ ಕೃಷಿಯಿಂದ ಬಡತನ ನಿರ್ಮೂಲನೆ'
ಗುಲ್ಬರ್ಗ: ಜಿಲ್ಲೆಯಲ್ಲಿ ವೈವೋಲ್ಟಿನ್ ರೇಷ್ಮೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದು, ಒಂದು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ. ರೇಷ್ಮೆ ಗೂಡಿನ ಧಾರಣೆಯು ಸಹ ಪ್ರತಿ ಕೆಜಿಗೆ 450 ವರೆಗೆ ಇದ್ದು, ದ್ವಿತಳಿ ರೇಷ್ಮೆ ಗೂಡು ಮಾರಾಟದಿಂದ ಬೆಳೆಗಾರರಿಗೆ ಉತ್ತಮ ಆದಾಯ ದೊರಕುತ್ತಿದ್ದು, ಇದರ ಲಾಭ ಪಡೆದುಕೊಳ್ಳಲು ರೇಷ್ಮೆ ಉಪನಿರ್ದೇಶಕ ಆರ್. ವೇಣುಗೋಪಾಲ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಆರ್. ವೇಣುಗೋಪಾಲ ರೇಷ್ಮೆ ಉಪನಿರ್ದೇಶಕ ಗುಲ್ಬರ್ಗ ಮೊ. 9845681300. ಎಸ್.ಜಿ. ಬಿರಾದಾರ ರೇಷ್ಮೆ ಸಹಾಯಕ ನಿರ್ದೇಶಕರು ಗುಲ್ಬರ್ಗ ಮೊ. 9886772052. ನಾಗಪ್ಪ ಬಿರಾದಾರ ರೇಷ್ಮೆ ಸಹಾಯಕ ನಿರ್ದೇಶಕರು ಆಳಂದ ಮೊ. 9448103173. ಪ್ರಕಾಶಬಾಬು ರೇಷ್ಮೆ ವಿಸ್ತರಣಾಧಿಕಾರಿಗಳು ತಾಂತ್ರಿಕ ಸೇವಾ ಕೇಂದ್ರ ಮೊ. 7899987714. ಜೆ.ವಿ. ಉಪ್ಪಾರ ರೇಷ್ಮೆ ಸಹಾಯಕ ನಿರ್ದೇಶಕರು ಜೇವರ್ಗಿ ಮೊ. 9742734166. ಮಹ್ಮದ್ ಇಸ್ಮಾಯಿಲ್ ಮಳಖೇಡ, ಪ್ರಭಾರಿ ಅಧಿಕಾರಿ ಚಿಂಚೋಳಿ ಮೊ. 9900702079. ನರಸಪ್ಪ ಹುಡಗಿ ಪ್ರಭಾರಿ ಅಧಿಕಾರಿಗಳು ಸೇಡಂ ಮೊ. 8904749243 ಮತ್ತು ಎನ್.ಎಸ್. ಪಾಟೀಲ್ ಪ್ರಭಾರಿ ಅಧಿಕಾರಿ ಚಿತ್ತಾಪುರ ಮೊ. 9480161696.

ಇಂದಿನಿಂದ ರೈತ ಸಂಘದ ಸಮ್ಮೇಳನ
ಗುಲ್ಬರ್ಗ: ಕರ್ನಾಟಕ ಪ್ರಾಂತ ರೈತಸಂಘದ ವತಿಯಿಂದ ಜೂ.24 ಮತ್ತು 25ರಂದು ಎರಡು ದಿನಗಳ ಕಾಲ ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ 10ನೇ ಸಮ್ಮೇಳನ ಆಯೋಜಿಸಲಾಗಿದೆ. ಕಂಪನಿ ಕೃಷಿಯನ್ನು ವಿರೋಧಿಸಲು, ರೈತ, ಕೂಲಿಕಾರರ, ಕೃಷಿಯನ್ನು ಸಂರಕ್ಷಿಸಲು, ಭೂಮಿ ಮತ್ತು ಮನೆ ನಿವೇಶನ ಹಾಗೂ ಎಲ್ಲರಿಗೂ ಪಡಿತರ ಚೀಟಿ ನೀಡಲು ಒತ್ತಾಯಿಸಿ ಹಾಗೂ ತೊಗರಿ ಬೆಳೆ ಸಂರಕ್ಷಣೆಗಾಗಿ ಆಗ್ರಹಿಸಿ ಈ ಸಮ್ಮೇಳನ ಆಯೋಜಿಸಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎರಡು ಜಿಲ್ಲೆಗಳ ಸುಮಾರು 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮೊದಲ ದಿನ 24ರಂದು ಸೂಪರ್ ಮಾರ್ಕೆಟ್‌ನಲ್ಲಿ 2000ಕ್ಕೂ ಅಧಿಕ ರೈತ ಕೂಲಿಕಾರರು ಭಾಗವಹಿಸಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.

ವಿದ್ಯಾವಲ್ಲಭ ತೀರ್ಥರ ಆಗಮನ
ಗುಲ್ಬರ್ಗ: ಉಡುಪಿಯಲ್ಲಿ ಬರುವ ಜನವರಿಯಲ್ಲಿ ನಡೆಯಲಿರುವ ಶ್ರೀಕೃಷ್ಣನ ಪೂಜಾ ಕೈಂಕರ್ಯ ಮತ್ತು ಪರ್ಯಾಯ ಪೀಠಾರೋಹಣ ಮಾಡಲಿರುವ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು ಜೂ.25ರಂದು ಗುಲ್ಬರ್ಗಕ್ಕೆ ಆಗಮಿಸಲಿದ್ದಾರೆ. ಅಂದು ಸಂಜೆ 5ಕ್ಕೆ ಗುಲ್ಬರ್ಗಕ್ಕೆ ಆಗಮಿಸುವ ಶ್ರೀಗಳು ವಿದ್ಯಾನಗದಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅಂದು ಸಂಜೆ 5.30ಕ್ಕೆ ರಾಮಮಂದಿರದಿಂದ ಜೇವರ್ಗಿ ಕಾಲೋನಿ ರಾಯರ ಮಠದವರೆಗೆ ಶೋಭಾಯಾತ್ರೆ ನಡೆಯಲಿದೆ. 7ರಿಂದ ಗುಲ್ಬರ್ಗದ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಸಮರ್ಪಣೆ ನಡೆಯಲಿದೆ. ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಲಿದೆ.

ಕಲುಷಿತ ನೀರಿನಲ್ಲಿ ಬಿದ್ದು ವೃದ್ಧ ಸಾವು
ಚಿಂಚೋಳಿ: ತಾಲೂಕಿನ ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಸ್ಥಾನ ಹತ್ತಿರದಲ್ಲಿ ವಯೋವೃದ್ಧನು ಮುಲ್ಲಾಮಾರಿ ನದಿಯ ಕಲುಷಿತ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತನನ್ನು ಸಾಯಪ್ಪ ತಂದೆ ಯಲ್ಲಪ್ಪ ದಾಸರ(65) ಎಂದು ಗುರುತಿಸಲಾಗಿದೆ. ಮಕ್ಕಳ ಆಟಿಕೆ ಸಾಮಗ್ರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಕುಡಿದ ಅಮಲಿನಲ್ಲಿ ಕಲುಷಿತ ನೀರಿನಲ್ಲಿ ಬಿದ್ದು ಮೇಲಕ್ಕೆ ಏಳಲಾಗದೇ ನೀರು ಕುಡಿದು ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಡಿಕ್ಕಿ: ಸವಾರ ಸಾವು
ಗುಲ್ಬರ್ಗ: ಮಹೇಂದ್ರ ಮ್ಯಾಕ್ಸಿಮೋ ವಾಹನಮೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೇಡಂನ ರೇಲ್ವೆ ಓವರ್ ಬ್ರಿಡ್ಜ್ ರಸ್ತೆಯಲ್ಲಿ ನಡೆದಿದೆ. ಸೇಡಂ ವಾಲ್ಮೀಕಿ ನಗರ ರಾಜು ತಂದೆ ಭೀಮಣ್ಣ ಸಾವಿಗೀಡಾಗಿದ್ದಾನೆ. ಈತ ಸೇಡಂನ ವಾಸವದತ್ತಾ ಕಂಪನಿಯಲ್ಲಿ ಲೊಡಿಂಗ್ ಕೆಲಸಕ್ಕೆಂದು ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement