ಶಾಸಕ ತಿಪ್ಪರಾಜು ಹವಾಲ್ದಾರಗೆ ಸನ್ಮಾನ
ಶಹಾಪುರ: ಸುರಪುರ ಸಂಸ್ಥಾನದಲ್ಲಿ ಯುದ್ಧ ತರಬೇತಿಯ ಕೇಂದ್ರವಾಗಿದ್ದ ವನದುರ್ಗದಲ್ಲಿ ಜನ್ಮತಾಳಿದ ನಾನು ಸಹಜವಾಗಿ ರಾಜಕೀಯ ಪಟ್ಟುಗಳನ್ನು ಕಲಿತುಕೊಂಡು ರಾಜಕೀಯ ಗುರು ಶಿವನಗೌಡ ನಾಯಕರ ಅಭಯದಿಂದ ಶಾಸಕನಾದೆ. ಶಾಸಕನಾಗಲು ಯಾವುದೇ ಗಡಿ ಗುರುತು ಬೇಕಾಗಿಲ್ಲ. ಗೆಲವಿಗೆ ಆತ್ಮವಿಶ್ವಾಸ, ಪ್ರಾಮಾಣಿಕ ಪ್ರಯತ್ನ ಸಾಕು. ಜನ್ಮಕೊಟ್ಟ ಗ್ರಾಮಕ್ಕೆ ಶಾಶ್ವತ ಯೋಜನೆಯೊಂದು ರೂಪಿಸಿ ಅದನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸುವೆ ಎಂದು ರಾಯಚೂರು ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ ಹೇಳಿದರು.
ತಾಲೂಕಿನ ವನದುರ್ಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆತ್ಮವಿಶ್ವಾಸ: ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಮಾತನಾಡಿ, ಎಲ್ಲಾ ಅಧಿಕಾರಕ್ಕಿಂತ ರಾಜಕೀಯ ಅಧಿಕಾರ ಪ್ರಬಲ ಶಕ್ತಿಯಾಗಿರುವ ಇಂದಿನ ದಿನದಲ್ಲಿ ನಮ್ಮ ಕಣ್ಣು ಮುಂದೆ ಬೆಳೆದ ಹುಡುಗ ತಿಪ್ಪರಾಜು ಶಾಸಕನಾಗುವ ಮೂಲಕ ಹಿಂದುಳಿದ ಸಮುದಾಯಕ್ಕೆ ಭರವಸೆಯ ಆತ್ಮವಿಶ್ವಾಸ ಮೂಡಿಸಿದೆ. ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಚಿಕ್ಕವಯಸ್ಸಿನಲ್ಲಿ ರಾಜಕೀಯ ಹುಚ್ಚು ಹಿಡಿಸಿಕೊಂಡ ಪೋರ ಈಗ ಶಾಸಕರಾಗಿದ್ದಾರೆ. ಅಪ್ಪನ ಕಡುಕಷ್ಟ, ತಾಯಿಯ ಕಣ್ಣೀರು, ಬಡತನದ ನೆರಳು ಸಾಕಷ್ಟು ಮಾಗಿಸಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮದ ಸಮಸ್ಯೆಯ ಬಗ್ಗೆ ನಮಗೆ ಅರಿವು ಇರಬೇಕು. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಕ್ಷೇತ್ರದಲ್ಲಿ ಅವುಗಳನ್ನು ಅನುಷ್ಠಾನಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು ಅವರು ಕಿವಿಮಾತು ಹೇಳಿದರು.
ಜನಪರ ಕಾರ್ಯ: ಮಾಜಿ ಸಚಿವ ಕೆ. ಶಿವನಗೌಡ ನಾಯಕ ಮಾತನಾಡಿ, ಕ್ಷೇತ್ರದಲ್ಲಿ ಶಾಶ್ವತವಾದ ಕೆಲಸಗಳನ್ನು ನಿರ್ವಹಿಸುವುದರ ಮೂಲಕ ನಮ್ಮ ಅಸ್ತಿತ್ವನ್ನು ಉಳಿಸಿಕೊಳ್ಳಬೇಕು. ರಾಜಕೀಯ ಎದುರಾಳಿಗೆ ಜನಪರವಾಗಿ ಕೈಗೆತ್ತಿಕೊಂಡ ಸವಾಲಿನ ಕೆಲಸಗಳು ಜವಾಬ್ ಆಗಬೇಕು. ಉತ್ತಮ ಕೆಲಸಗಳನ್ನು ಮಾಡುವಾಗ ಯಾರೂ ಅಡ್ಡಿಯಾಗಬಾರದು. ನಮ್ಮವರು ಎಂದು ನಂಬಿದ ಕಾರ್ಯಕರ್ತರನ್ನು ಕೈಬಿಡಬಾರದು ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆಯನ್ನು ತಾಪಂ ಮಾಜಿ ಅಧ್ಯಕ್ಷ ಹಣಮಂತರಾಯ ದೊರೆ ವಹಿಸಿದ್ದರು. ಜಿಪಂ ಸದಸ್ಯ ಹನುಮೇಗೌಡ ಮರಕಲ್, ವಸಂತ ಸುರಪುರಕರ್, ಆರ್.ಚೆನ್ನಬಸು, ರಾಮಚಂದ್ರ ಕಾಶಿರಾಜ, ಯಲ್ಲಯ್ಯ ನಾಯಕ, ತ್ರಿಶೂಲ ಹವಾಲ್ದಾರ, ಬಿ.ಮಾನಪ್ಪ ನಾಯಕ, ಚೆನ್ನಪ್ಪ ಕಾಶಿರಾಜ, ಹಳ್ಳೆಪ್ಪ ಹವಾಲ್ದಾರ, ಮಾನಪ್ಪ ಸುಗೂರ, ದೇವಿಂದ್ರಪ್ಪ ಗೌಡಗೇರಿ, ಭೀಮರಾಯ ನುಚ್ಚಿನ, ವೆಂಕೋಬ ಪಾಟೀಲ್, ದೇವಿಂದ್ರ ಶರ್ಮಾ, ಬಸವರಾಜ ಯಾಳಗಿ, ಹಣಮಂತ ಕವಲಿ ಇದ್ದರು.