ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆರ್ಸೆನಿಕ್‌ಯುಕ್ತ ನೀರು: ಈಗ ಇನ್ನೊಂದು ಸಮಸ್ಯೆ

Lingaraj Badiger
Updated On : 25 Jun 2013, 11:59 am

ಕ.ಪ್ರ. ವಾರ್ತೆ  ಯಾದಗಿರಿ  ಜೂ.24
ಆರ್ಸೆನಿಕ್‌ಯುಕ್ತ ನೀರಿನ ದುಷ್ಪರಿಣಾಮ ಅರಿತಿರುವ ರಾಜ್ಯ ಸರ್ಕಾರ ಅಂತಹ ಕೊಳವೆಬಾವಿಗಳ ಮುಟ್ಟುಗೋಲಿಗೆ ಆದೇಶಿಸಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಆದರೆ ಶುದ್ಧ ಕುಡಿವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಈಗ ತೀವ್ರ ಸಮಸ್ಯೆ ತಂದೊಡ್ಡಿದೆ.
 ಆರ್ಸೆನಿಕ್ ನೀರು ಹೊಂದಿರುವ ಕೊಳವೆಬಾವಿಗಳನ್ನು ಜೂ. 30ರೊಳಗೆ ಸೀಜ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಅವರು ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 19 ಗ್ರಾಮಗಳಲ್ಲಿನ ಬೋರ್‌ವೆಲ್‌ಗಳಿಗೆ ಕೆಂಪುಬಣ್ಣ ಹಚ್ಚುವ ಕಾರ್ಯ ಶನಿವಾರದಿಂದಲೇ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಅಧಿಕ ಫ್ಲೋರೈಡ್ ಅಂಶವಿರುವ ಕೊಳವೆಬಾವಿಗಳಿಗೆ ಬಣ್ಣ ಹಚ್ಚಿ ನಿಷೇಧಿಸಲಾಗುವುದು. ಇಲ್ಲಿ ಸೂಚನಾ ಫಲಕಗಳನ್ನೂ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ತಿಳಿಸಿದ್ದಾರೆ.
ಕುಡಿವ ನೀರಿಗೆ ಪರದಾಟ: ಆದರೆ, ಜಿಲ್ಲಾಡಳಿತ ಇಷ್ಟು ವರ್ಷಗಳ ಕಾಲ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಈಗ ಏಕಾಏಕಿಯಾಗಿ ಇದ್ದ ಬೋರ್‌ವೆಲ್‌ಗಳನ್ನು ಸೀಜ್ ಮಾಡಿರುವುದರಿಂದ ಕುಡಿವ ನೀರಿಗಾಗಿ ಜನರು ಪರದಾಡುವಂತಾಗಿದೆ. ಶುದ್ಧ ನೀರಿನ ಪೂರೈಕೆಗೆ ಕ್ರಮ ಕೈಗೊಂಡಿದ್ದರೂ, ಜನ- ಜಾನುವಾರುಗಳಿಗೆ ಅಗತ್ಯ ನೀರು ಲಭ್ಯವಾಗದೇ ಆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೀಘ್ರದಲ್ಲಿ ಬೇಕಾದಷ್ಟು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕಾಗಿದೆ.
ವರದಿ ಪರಿಣಾಮ: ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದ ಜನತೆ ಆರ್ಸೆನಿಕ್‌ಯುಕ್ತ ನೀರು ಕುಡಿದು ಪಡುತ್ತಿರುವ ಬವಣೆ ಹಾಗೂ ಕ್ಯಾನ್ಸರ್‌ನಿಂದ ತಾಂಡಾದ ಅನೇಕರು ಮೃತಪಟ್ಟಿರುವ ಬಗ್ಗೆ 'ಕನ್ನಡಪ್ರಭ' ಕಳೆದ ಜೂ.17ರಂದು 'ಕಿರದಳ್ಳಿಗೆ ಜೀವ ಜಲ ತಂದಿದೆ ಜೀವಭಯ' ಎಂಬ ವರದಿ ಪ್ರಕಟಿಸಿತ್ತು. ಅಲ್ಲಿಯ ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಬಿಚ್ಚಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಅರ್ಸೆನಿಕ್ ನೀರು ಹೊಂದಿರುವ ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಿಗೆ ಸಚಿವ ಎಚ್.ಕೆ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದರು. ಯಾದಗಿರಿ ಜಿಲ್ಲೆಯ ಕಿರದಳ್ಳಿ ಗ್ರಾಮಕ್ಕೆ ಸಚಿವ ಬಾಬುರಾವ್ ಚಿಂಚನಸೂರ ಭೇಟಿ ನೀಡಿದ್ದರು. ಇದರ ಪರಿಣಾಮ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಈಗ ಅವಸರದಲ್ಲಿ ಆರ್ಸೆನಿಕ್‌ಯುಕ್ತ ನೀರು ಬರುವ ಬೋರ್‌ವೆಲ್‌ಗಳ ಬಾಯಿ ಬಂದ್ ಆಗಿದೆ.
  ಆ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಒದಗಿಸುವ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಪಂ.ಗೆ 1 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಆರ್ಸೆನಿಕ್‌ಯುಕ್ತ ವಿಷ ನೀರು ಕುಡಿದು ಬಳಲುತ್ತಿದ್ದ ಗ್ರಾಮಗಳಿಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದೆ ಎನ್ನಬಹುದು.
  ಸುರಪುರ ತಾಲೂಕಿನ ಕಿರದಳ್ಳಿ ತಾಂಡಾ, ಗೋಡ್ರಿಹಾಳ, ಮಾವಿನಮಟ್ಟಿ, ಚಿಗರಳ್ಳಿ, ಹಳೆ ಅಮ್ಮಾಪುರ, ನಾಗರಾಳ, ಬಿಜಾಸಪುರ, ಗೌಡಗೇರಾ, ಗೋಡಿಹಾಳ, ಚಿಗರಿಹಾಳ, ಮಾರನಾಳ, ತಳ್ಳಳ್ಳಿ, ಮಂಗಳೂರು, ಜೈನಾಪುರ, ಕರಡಕಲ್, ಅರಕೇರಾ, ಮುದನೂರು, ಖಾನಾಪುರ, ಹೆಗ್ಗನದೊಡ್ಡಿ, ಪರಸನಳ್ಳಿ ಗ್ರಾಮಗಳಲ್ಲಿನ ಕೊಳವೆಬಾವಿಗಳು ಸೀಜ್ ಆಗಲಿವೆ. ಈ ಎಲ್ಲ ಗ್ರಾಮಗಳಿಗೆ ಜೂ.30ರ ನಂತರ ಶುದ್ಧ ನೀರು ಒದಗಿಸಲು ಜಿಪಂ ಕ್ರಮ ಜರುಗಿಸಲಿದೆ. ಪರ್ಯಾಯ ನೀರಿನ ವ್ಯವಸ್ಥೆ ಮಾಡುವುದಾಗಿ ಜಿಪಂ ಸಿಇಒ ಜಿಲಾನಿ ತಿಳಿಸಿದ್ದಾರೆ. ಆದರೆ ಇದು ಜಿಡ್ಡು ಹಿಡಿದಿರುವ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ, ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement