ಜಿಲ್ಲಾ ಪಂಚಾಯ್ತಿ ಅಕ್ಷರ ದಾಸೋಹಕ್ಕೆ ವಿಶೇಷ ಅಧಿಕಾರಿ ನೇಮಕ
ಗುಲ್ಬರ್ಗ: ಸಂತ ಕಬೀರದಾಸ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗುಲ್ಬರ್ಗದ ಗಂಗಾಧರ ಬಕ್ಕಪ್ರಭು ಪ್ರೌಢಶಾಲೆ ಮತ್ತು ಕುರಿಕೋಟಾದ ಚೆನ್ನವೀರ ಶಿವಯೋಗಿ ಸ್ಮಾರಕ ಪ್ರೌಢಶಾಲೆಗಳಿಗೆ ಜಿಪಂ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಅವರನ್ನು ವಿಶೇಷಾಧಿಕಾರಿಗಳೆಂದು ನೇಮಿಸಲಾಗಿದೆ.
ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಸೈಯದ್ ಅಬ್ದುಲ್ ರಬ್ ಅವರು ಈ ಆದೇಶ ಹೊರಡಿಸಿದ್ದು, ಇದು ಜೂನ್ 21ರಿಂದ ಒಂದು ವರ್ಷದ ಅವಧಿಗೆ ಜಾರಿಯಲ್ಲಿರುತ್ತದೆ.
ಎರಡು ಶಾಲೆಗಳ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಮಾನಸಿಕ ಮತ್ತು ಆರ್ಥಿಕ ದೌರ್ಜನ್ಯ ನೀಡಿರುವುದು ಸಾಬೀತಾಗಿರುವ ಹಿನ್ನೆಯಲ್ಲಿ ಈ ಎರಡು ಶಾಲೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಅಪರ ಆಯುಕ್ತರು ತಿಳಿಸಿದ್ದಾರೆ.
ಸಂತ ಕಬೀರದಾಸ ಶಿಕ್ಷಣ ಸಂಸ್ಥೆಯ ಎರಡು ಶಾಲೆಗಳಿಗೆ ವಿಶೇಷಾಧಿಕಾರಿಯನ್ನು ನೇಮಿಸಿರುವುದಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದ ರಾಜ್ಯಾಧ್ಯಕ್ಷ ಎ. ಬಿ. ಹೊಸಮನಿ ಸ್ವಾಗತಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಟಿ.ಎಂ. ಬಾವಿದೊಡ್ಡಿ ಅವರು ಶಿಕ್ಷಕ, ಸಿಬ್ಬಂದಿಗಳಿಗೆ ನೀಡುತ್ತಿರುವ ಕಿರುಕುಳದಿಂದಾಗಿ ಬೇಸತ್ತು ಹೋಗಿದ್ದರು.
ಆರ್ಪಿಐ, ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ಕೈಗೊಂಡು ಆಡಳಿತಾಧಿಕಾರಿ ನೇಮಿಸುವಂತೆ ಒತ್ತಾಯಿಸಲಾಗಿತ್ತು. ಬೇಡಿಕೆಗೆ ಸ್ಪಂದಿಸಿ ಅಪರ ಆಯುಕ್ತರು ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿರುವುದು ಹೋರಾಟಕ್ಕೆ ಸಂದ ಜಯ ಎಂದು ಹೊಸಮನಿ ಅವರು ತಿಳಿಸಿದ್ದಾರೆ.