ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಾವೈಕ್ಯತೆ ಸಂತ ಚಾಂದ್ ಹುಸೇನಿ: ರಂಜಾನ ದರ್ಗಾ

Lingaraj Badiger
Updated On : 25 Jun 2013, 12:00 pm

ಕನ್ನಡಪ್ರಭ ವಾರ್ತೆ  ಶಹಾಪುರ  ಜೂ.24
ಮುಸ್ಲಿಂ ಅರಸರಲ್ಲಿ ಭಾರತೀಯ ಭಾವೈಕೈತೆಗೆ ಬಾಬರನಿಂದ ಕೊಡುಗೆ ಪ್ರಾರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಆದರೆ ಇದಕ್ಕಿಂತ ಪೂರ್ವದಲ್ಲಿ ಬಿಜಾಪುರ ಆದಿಲ್ ಶಾಹಿಗಳಿಗೆ ಭಾವೈಕ್ಯತೆಯ ಆಧಾರದ ಮೇಲೆ ಆಡಳಿತ ನಡೆಸುವ ಹಾದಿ ತೋರಿದ ಸಂತ ಎಂದರೆ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಚಂದಾ ಹುಸೇನ್ ವಲಿ ಎಂದು ರಂಜಾನ ದರ್ಗಾ ಹೇಳಿದರು.
 ತಾಲೂಕಿನ ಗೋಗಿಯಲ್ಲಿ  ಚಂದಾ ಹುಸೇನ್ ಅವರ 576ನೇ ಉರಸ್ ಅಂಗವಾಗಿ ಏರ್ಪಡಿಸಿದ್ದ ಸರ್ವ ಧರ್ಮ ಸಮ್ಮೇಳನ ಹಾಗು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜನಿಗೇ ಆಶ್ರಯ ನೀಡಿದ್ದ ಸಂತ: ಜಗತ್ತಿನ ಎಲ್ಲ ನದಿಗಳು, ಸಾಗರ ಸೇರುವಂತೆ ದೇವನೊಬ್ಬ ನಾಮ ಹಲವು ಎನ್ನುವಂತೆ, ಪರಮಾತ್ಮ ಎಂಬ ಸಾಗರದ ಕಡೆ ಸೇರುವುದೇ ಸೂಫಿ ತತ್ವವಾಗಿದೆ. ಯಾರಲ್ಲಿ ದಯೆ, ಕರುಣೆ, ಪ್ರೀತಿ, ವಾತ್ಸಲ್ಯಗಳು ಇರುತ್ತದೆಯೇ ಅವರೇ ಸೂಫಿ ಸಂತರು, ದಾಸರು, ಶರಣರಾಗಿದ್ದಾರೆ. ಭಾರತದಲ್ಲಿ ಭಾವ್ಯಕೈತೆಯ ಪರಂಪರೆಗೆ ನಾಂದಿ ಹಾಡಿದ್ದು ಸಗರನಾಡು ಎಂದು ಖ್ಯಾತಿ ಇದೆ. ರಾಜರ ಆಶ್ರಯದಲ್ಲಿ ಅನೇಕ ಸಂತರಿರುವುದನ್ನು ನೋಡಿದ್ದೇವೆ. ಆದರೆ ಈ ಗೋಗಿಯ ಸಂತ ಚಾಂದ್ ಹುಸೇನಿ, ರಾಜನಿಗೇ ಆಶ್ರಯ ನೀಡಿದ ಏಕೈಕ ಸಂತನಾಗಿದ್ದ ಎಂದು ನುಡಿದರು.
ಮಾವವ ಕುಲವೊಂದೇ..: ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ದಿಲ್‌ಶಾ ಮಾತನಾಡಿ, ನಮ್ಮ ನಾಡಿನ ಯಾವುದೇ ಶರಣ ಸಂತರ ವಿಚಾರಗಳ ಭಾಷೆಗಳು ಬೇರೆ ಬೇರೆಯಾಗಿರಬಹುದು. ಆದರೆ ಭಾವನೆಗಳು ಒಂದೇ ಆಗಿವೆ. ಹೇಗೆ ನೆಲವೊಂದೇ ಜಲವೊಂದೇ ಎಂಬಂತೆ ಮಾನವ ಕುಲವು ಒಂದೇ ಆಗಿದೆ ಎಂದು ಹೇಳಿದರು.
  ಸಮಾರಂಭದ ಅದ್ಯಕ್ಷತೆಯನ್ನ ತಕ್‌ದ್ದುಸ್ ಮಾಬ ಹಜರತ್ ಸೈಯ್ಯದ್ ಶಾಹಾ ವಹಿಸಿದ್ದರು. ಶಾಸಕ ಗುರು ಪಾಟೀಲ ಶಿರವಾಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಮೌಲಾನ ಸೈಯ್ಯದ್ ಸಾಹೇಬ್ ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ್ರಪ್ಪ ಗೋನಾ ನಿರೂಪಿಸಿದರು. ಸೈಯ್ಯದ್ ಕರಿವುಲ್ಲಾ ವಂದಿಸಿದರು. ನಂತರ ಡಾ. ಬಸವರಾಜ ಇಜೇರಿ, ಪ್ರಭುರಾಜ ಮಡ್ಡಿ, ಗುರುರಾಜ ಸತ್ಯಂಪೇಟೆ ನೇತೃತ್ವದ ವೈದ್ಯರ ತಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿತು.
--
ತಂಪು ತಂದ ಮಳೆ
ಯಾದಗಿರಿ: ಅಂತೂ ಇಂತೂ ಜಿಲ್ಲೆಗೆ ಮಳೆ ಅಡಿಯಿಟ್ಟಿದೆ. ಮುಂಗಾರು ಆರಂಭವಾಗಿ ಮೂರು ವಾರ ಕಳೆದರೂ ಮಳೆ ಬೀಳದ್ದರಿಂದ ಕಂಗಾಲಾಗಿದ್ದ ರೈತರಿಗೆ ಸೋಮವಾರ ಬಿದ್ದ ಮಳೆಯಿಂದ ಸ್ವಲ್ಪ ನೆಮ್ಮದಿ ತಂದಿದೆ. ಅಲ್ಲದೇ ವಾತಾವರಣವನ್ನೂ ತಂಪುಗೊಳಿಸಿದೆ. ಸೋಮವಾರ ಮಧ್ಯಾಹ್ನದ ನಂತರ ನಗರದಲ್ಲಿ ಆಗಾಗ ಮಳೆಯಾಗಿ, ತಂಪು ತಂದಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಮಳೆ ಬೀಳುತ್ತಿದ್ದು, ಸೋಮವಾರ ಮುಂಗಾರು ಚುರುಕುಗೊಂಡಿದೆ. ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ. ಶಹಾಪುರ, ಸುರಪುರ, ಗುರುಮಠಕಲ್ ಹಾಗೂ ಗ್ರಾಮೀಣ ಭಾಗದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ. ಇದುವರೆಗೆ ಮಳೆಯಿಲ್ಲದೇ ಬಿತ್ತನೆ ಕಾರ್ಯಕ್ಕೆ ತೊಡಕುಂಟಾಗಿತ್ತು. ಆದರೆ ಇದುವರೆಗೆ ಬಿದ್ದ ಮಳೆಯಿಂದ ಕೆರೆ, ಹಳ್ಳಗಳು ಇನ್ನೂ ಮೈದುಂಬಿಕೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement