ಯುವತಿ ಅಪಹರಣ
ಗುಲ್ಬರ್ಗ: ಯುವತಿಯೊಬ್ಬಳನ್ನು ದ್ವಿಚಕ್ರ ವಾಹನದ ಮೇಲೆ ಅಪಹರಿಸಿಕೊಂಡು ಹೋದ ಘಟನೆ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆದಿದೆ. 20 ವರ್ಷದ ಯುವತಿ ತನ್ನ ತಾಯಿಯೊಂದಿಗೆ ಹೊರಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಸೋಮಶೇಖರ, ಶಿವಾನಂದ, ಪದ್ಮಣ್ಣ, ಯಲ್ಲಾಲಿಂಗ ಮತ್ತು ಬೀರಪ್ಪ ಎಲ್ಲರೂ ಅವರನ್ನು ಅಡ್ಡಗಟ್ಟಿದ್ದರು. ಆಗ ಸೋಮಶೇಖರ ಮತ್ತು ಶಿವಾನಂದ ಅವರು ಯುವತಿ ಬಾಯಿ ಒತ್ತಿ ಹಿಡಿದು ದ್ವಿಚಕ್ರ ವಾಹನದ ಮೇಲೆ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿದ್ದಾರೆ.ಈ ಕುರಿತು ಯುವತಿ ತಂದೆ ಮಳಖೇಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ
ಗುಲ್ಬರ್ಗ: 10 ವರ್ಷದ ಬಾಲಕನ ಮೇಲೆ ವ್ಯಕ್ತಿಯೊಬ್ಬ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಚಿಂಚೋಳಿ ತಾಲೂಕಿನ ಏತೆಬಾರಪುರ ರಾಮಶೆಟ್ಟಿ ತಾಂಡಾದಲ್ಲಿ ನಡೆದಿದೆ. ರಾಹುಲ್ ತಂದೆ ಭಾವಸಿಂಗ್ ರಾಠೋಡ ಎಂಬ ಬಾಲಕ ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾನೆ.
ರಾಹುಲ್ ತಾಂಡಾದ ಕಿರಾಣಿ ಅಂಗಡಿಯಲ್ಲಿ ಪಾಪಡಿ ಖರೀದಿಸಿ, ಪಕ್ಕದ ಶಾಲಾ ಆವರಣದಲ್ಲಿ ಮಕ್ಕಳು ಆಟ ಆಡುತ್ತಿರುವುದನ್ನು ನಿಂತು ನೋಡುತ್ತಿದ್ದಾಗ ಬಾಬು ತಂದೆ ಭೀಮಸಿಂಗ್ ಎಂಬಾತ ಮಕ್ಕಳ ಕಡೆಗೆ ಕಲ್ಲು ಹೊಡೆಯುತ್ತಿದ್ದನು. ಕಲ್ಲು ಹೊಡೆಯಬೇಡ ಎಂದು ಕಿರಾಣಿ ಅಂಗಡಿ ಮಾಲೀಕ ರಮೇಶ ರಾಠೋಡ ಬುದ್ಧಿವಾದ ಹೇಳಿದ್ದನು. ಆಗ ಬಾಬು ಕೋಪಗೊಂಡ ಬಾಬು ರಾಹುಲ್ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿರುವ ಬಾಲಕನನ್ನು ಚಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜುಕೋರರ ಬಂಧನ
ಗುಲ್ಬರ್ಗ: ತಾಲೂಕಿನ ಪಟವಾದ ಗ್ರಾಮದ ಹೊಟೇಲ್ ಒಂದರ ಎದುರು ಜೂಜಾಟವಾಡುತ್ತಿದ್ದ, 10 ಜನರನ್ನು ಬಂಧಿಸಿ, ಅವರಿಂದ ರು. 3150 ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಕಮಲಾಪುರ ಪೊಲೀಸರು ಜೂಜಾಟದಲ್ಲಿ ನಿರತರಾದ ಸಂತೋಷ ತಂದೆ ಶಾಮರಾವ್, ರವಿ ತಂದೆ ಹಣಮಂತ ಜಮಾದಾರ್, ಸತೀಶ್ ತಂದೆ ಮಲ್ಲಿಕಾರ್ಜುನ ಖಾನಾಪುರ, ಶಂಕರ ತಂದೆ ನಾಗಶೆಟ್ಟೆಪ್ಪ ಪಾಟೀಲ್, ಸಂತೋಷ ತಂದೆ ರಾಜಪ್ಪ ರಾಮಾ, ಅಮೃತ ತಂದೆ ನಾಗಪ್ಪ ಜಮಾದಾರ, ರಮೇಶ ತಂದೆ ನರಸಪ್ಪ ಜಮಾದಾರ, ರಮೇಶ ತಂದೆ ಹಣಮಂತಪ್ಪ ಜಮಾದಾರ, ಅನೀಲ್ ತಂದೆ ರೇವಣಸಿದ್ದಪ್ಪ ರಂಜೇರಿ ಎಂಬುವರನ್ನು ಬಂಧಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.