ಸಂತ್ರಸ್ತರಿಗಾಗಿ ಮಕ್ಕಳಿಂದ ದೇಣಿಗೆ ಸಂಗ್ರಹ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.24
ಉತ್ತರಾಖಂಡ ಭೀಕರ ಜಲಪ್ರಳಯದಲ್ಲಿ ಬದುಕುಳಿದ ಸಂತ್ರಸ್ತರ ನೆರವಿಗೆ ಮುಂದಾದ ತಾಲೂಕಿನ ಸೈದಾಪುರದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪಟ್ಟಣದಲ್ಲೆಡೆ ಸಂಚರಿಸಿ ನಿಧಿ ಸಂಗ್ರಹಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರಾಖಂಡದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೇದರಾನಾಥ ಮತ್ತು ಬದರಿನಾಥ ದೇವಾಲಯಗಳ ಸಂಪೂರ್ಣವಾಗಿ ಹಾಳಾಗಿವೆ. ಅಲ್ಲದೇ ಯಾತ್ರೆಗೆ ಹೋದ ಸಾವಿರಾರು ಭಕ್ತರು ಅಸುನೀಗಿದ್ದು, ವಿಷಾದನೀಯ ಸಂಗತಿಯಾಗಿದೆ. ಬದುಕುಳಿದ ಹಲವು ದುರ್ದೈವಿಗಳು ತನ್ನವರೆಲ್ಲರನ್ನು ಕಳೆದುಕೊಂಡಿದ್ದು, ಊಟ ನೀರಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವ ನೆರೆ ಸಂತ್ರಸ್ತರ ನೆರವಿಗಾಗಿ ಶಾಲೆಯ ಮಕ್ಕಳು ಪರಿಹಾರ ನಿಧಿಯನ್ನು ಸಂಗ್ರಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಈ ವೇಳೆ ಮಾತನಾಡಿದ ಶಾಲೆಯ ಮುಖ್ಯಗುರು ರಾಘವೇಂದ್ರ ನಾಯಕ, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವ ಧರ್ಮ. ಅದರಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಉತ್ತರಾಖಂಡದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ನೆರವು ನೀಡಲು ಪಟ್ಟಣದಲ್ಲಿ ನಿಧಿ ಸಂಗ್ರಹಿಲಾಗಿದೆ. ನಮಗೆ ಸಾಧ್ಯವಾದ ಮಟ್ಟಿಗೆ ಅಳಿಲು ಸೇವೆಯನ್ನು ಮಾಡಿದ್ದೇವೆ ಎಂದರು. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ತಮ್ಮ ಉದಾರ ಮನಸ್ಸಿನಿಂದ ದೇಣಿಗೆ ನೀಡಿದಂತಹ ಸೈದಾಪುರ ನಾಗರಿಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಬೇಕೆಂದು ತಿಳಿಸಿದರು.
ಈ ವೇಳೆ ಶಾಲೆಯ ಶಿಕ್ಷಕರಾದ ನರಸಪ್ಪ ನಾರಾಯಣೋರ, ಸಾಬರೆಡ್ಡಿ ಕಂಬಾರ, ಆಂಜನೆಯ, ಸುಭದ್ರಮ್ಮ, ಯಲ್ಲಪ್ಪ ಪೂಜಾರಿ, ಮಂಜುಲತಾ, ಮಂಗಳ, ಕಲ್ಲಪ್ಪ, ಹಣಮಂತ, ಸಂಗೀತಾ ಇತರರು ಇದ್ದರು.