ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂತ್ರಸ್ತರಿಗೆ ಮಠಗಳಿಂದ ನೆರವು ಘೋಷಣೆ

Lingaraj Badiger
Updated On : 25 Jun 2013, 11:59 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.24
ಉತ್ತರಾಖಂಡದಲ್ಲಿ ಉಂಟಾದ ಪ್ರಕೋಪದಿಂದ ಸಂತ್ರಸ್ತತರಾದ ಸ್ಥಾನಿಕ ಜನರಿಗೆ ಪುನಾವಸತಿ ಕಲ್ಪಿಸಲು ಉತ್ತರಾಖಂಡದ ಮುಖ್ಯಮಂತ್ರಿಗಳ ಸಂತ್ರಸ್ತ ಪರಿಹಾರ ನಿಧಿಗೆ ಕಾಶಿ ಮತ್ತು ಶ್ರೀಶೈಲ ಜಗದ್ಗುರುಗಳು ತಮ್ಮ ಪೀಠದಿಂದ ತಲಾ 1 ಲಕ್ಷ ಕಳುಹಿಸುವುದಾಗಿ ಘೋಷಿಸಿದ್ದಾರೆ.
  ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ ಬೋಧನ ನಗರದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಬಸವ ಜಯಂತಿ ಹಾಗೂ ಸಿದ್ಧಾಂತ ಶಿಖಾಮಣಿ ತತ್ವಾಮೃತ ಗ್ರಂಥ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಆಶೀರ್ವಚನ ನೀಡಿ, ಪರಿಹಾರ ನಿಧಿಯನ್ನು ಅವರು ಘೋಷಿಸಿದರು.
ಸಮನ್ವಯತೆ ಸಂದೇಶ: ಉಭಯ ಶ್ರೀಗಳು ಆಶೀರ್ವಚನ ನೀಡಿ, ಪಂಚಪೀಠಗಳು ಸನಾತನ ವೀರಶೈವ ಧರ್ಮದ ರಾಷ್ಟ್ರೀಯ ಮಹಾಪೀಠಗಳಾಗಿವೆ. ಈ ಪೀಠಗಳ ಪರಮಾಚಾರ್ಯರು ಮನುಕುಲದ ಉದ್ಧಾರಕ್ಕಾಗಿ ವೀರಶೈವ ಧರ್ಮವನ್ನು ಪ್ರತಿ ಯುಗದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಅಂತೆಯೇ ಅವರ ಯುಗಮಾನೋತ್ಸವವನ್ನು ಪ್ರತಿವರ್ಷವೂ ಆಚರಿಸಲಾಗುವುದು. ಮಹಾತ್ಮ ಬಸವೇಶ್ವರರು ವೀರಶೈವ ಧರ್ಮವನ್ನು ಸ್ವೀಕರಿಸಿ ಅದನ್ನು ಸ್ವತಃ ಆಚರಿಸಿ ಪ್ರಚಾರ ಮಾಡಿದ್ದಕ್ಕಾಗಿ ಅವರ ಜಯಂತಿಯನ್ನು ಸಹ ಸಂಯುಕ್ತವಾಗಿ ಆಚರಿಸುವುದರ ಮೂಲಕ ಸಮನ್ವಯತೆಯ ಸಂದೇಶವನ್ನು ಸಾರಲಾಗುತ್ತದೆ ಎಂದು ನುಡಿದರು.
ಶಕ್ತ್ಯಾನುಸಾರ ದೇಣಿಗೆ ಕೊಡಿ: ಪಂಚ ಪೀಠಗಳಲ್ಲೊಂದಾದ ಕೇದಾರಪೀಠದ ಮುಖ್ಯ ಆರಾಧ್ಯ ದೇವ ಕೇದಾರನಾಥ ಜ್ಯೋತಿರ್ಲಿಂಗ ದೇವಸ್ಥಾನದ ಪರಿಸರದಲ್ಲಿ ಉಂಟಾದ ದೈವೀ ಪ್ರಕೋಪದ ಪರಿಹಾರಕ್ಕಾಗಿ ಎಲ್ಲ ರಾಜ್ಯ ಸರ್ಕಾರಗಳು ಸಹಾಯಹಸ್ತ ಚಾಚಿರುವುದು ಸಮಾಧಾನದ ಸಂಗತಿ. ಎಲ್ಲ ರಾಜ್ಯಗಳ ಮಠಾಧೀಶರು ತಮ್ಮ ಶಕ್ತ್ಯಾನುಸಾರ ಪರಿಹಾರ ನಿಧಿಯನ್ನು ಉತ್ತರಾಖಂಡದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿ ಸಹಕರಿಸಬೇಕೆಂದು ಕರೆ ನೀಡಿದರು.
ವಿದ್ವತ್ ಪುರಸ್ಕಾರ, ಧರ್ಮಭೂಷಣ ಪ್ರದಾನ: ಯುಗಮಾನೋತ್ಸವ ಸಮಾರಂಭದಲ್ಲಿ ವಿದ್ವಾನ್ ಡಾ. ಎಂ.ಮಹಾಂತಯ್ಯ ಮತ್ತು ಎಂ.ವೀರಭದ್ರಯ್ಯ ಸ್ವಾಮಿ ಸಾರಂಗಮಠ ಅವರಿಗೆ ಕಾಶಿ ಪೀಠದಿಂದ ವಿದ್ವತ್ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. 34 ಜನರಿಗೆ ಧರ್ಮಭೂಷಣ ಪ್ರಶಸ್ತಿಯನ್ನು ಕೊಡಮಾಡಲಾಯಿತು.
  ಅಲ್ಲದೇ ಆಂಧ್ರಪ್ರದೇಶದ 118 ಬಡ ವಿದ್ಯಾರ್ಥಿಗಳಿಗೆ ಉಚ್ಚ ಶಿಕ್ಷಣಕ್ಕಾಗಿ ಕಾಶೀ ಪೀಠ ಮತ್ತು ಹೈದ್ರಾಬಾದ್ ಧರ್ಮಪ್ರಚಾರ ಸಂಘದ ವತಿಯಿಂದ 2.5 ಲಕ್ಷ ವಿದ್ಯಾರ್ಥಿವೇತನವನ್ನು ಉಭಯ ಜಗದ್ಗುರುಗಳು ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement