ಅಲ್ಪಸಂಖ್ಯಾತರ ಮನೆಗಳ ಹಂಚಿಕೆಗಾಗಿ ಗ್ರಾಮಸಭೆ
ಯಾದಗಿರಿ: ತಾಲೂಕಿನ ಸೈದಾಪುರ ಗ್ರಾಪಂ.ನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷ ಪ್ರಕರಣದಡಿ ಮನೆಗಳ ಹಂಚಿಕೆಗಾಗಿ ಗ್ರಾಮ ಸಭೆ ನಡೆಸಲಾಯಿತು. ಗ್ರಾಮದ ಬಸವರಾಜ ನಾಯಕ, ರಾಜು ದೊರೆ, ಅನೀಲ, ಭಾಸ್ಕರ ಬೆಳಗುಂದಿ ಇತರರು ಮಾತನಾಡಿ, 2012ರಲ್ಲಿ ಸಲ್ಲಿಸಲಾದ ಪಟ್ಟಿಯಲ್ಲಿನ ಫಲಾನುಭವಿಗಳಿಗೆ ಇದುವರೆಗೆ ಮನೆ ಹಂಚಿಕೆಯಾಗಿಲ್ಲ. ಅದನ್ನು ಪೂರ್ಣಗೊಳಿಸಿ, ನಂತರ ಪಟ್ಟಿಯನ್ನು ತಯಾರಿಸಿ ಎಂದು ಆಗ್ರಹಿಸಿದರು. ಈ ವೇಳೆ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯುತು. ಕೆಲ ಪಂಚಾಯಿತಿಗಳಲ್ಲಿ ಈಗಾಗಲೇ ಪಟ್ಟಿಯ ಪ್ರಕಾರ ಫಲಾನುಭವಿಗಳ ಹೆಸರಿನಲ್ಲಿ ಮನೆಗಳಾಗಿವೆ. ಇಲ್ಲಿ ಅವುಗಳ ಹಂಚಿಕೆಯಾಗದಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಈಗಾಗಲೇ ತಯಾರಿಸಲಾಗಿರುವ ಪಟ್ಟಿಯಲ್ಲಿನ ಮನೆಗಳನ್ನು ಅವರ ಹೆಸರಿನಲ್ಲಿ ಪೂರ್ಣಗೊಳಿಸದೇ, ಹೊಸ ಮನೆಗಳ ಹಂಚಿಕೆ ಹೇಗೆ ಸಾಧ್ಯವೆಂದು ಅನೇಕರು ಪ್ರಶ್ನಿಸಿದರು. ಅವುಗಳ ಬಗ್ಗೆ ಸೂಕ್ತ ಕ್ರಮದೊಂದಿಗೆ ಹಂಚಿಕೆ ಮಾಡಲಾಗುವುದೆಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು. ನಂತರ ಫಲಾನುಭವಿಗಳ ಆಯ್ಕೆಗೆ ಒಪ್ಪಿಗೆ ಸೂಚಿಸಲಾಯಿತು. ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಲಲಿತಮ್ಮ, ಶ್ಯಾಮಲಾ, ಶಿವರಾಯ, ಚಂದ್ರಶೇಖರ, ಸುರೇಶ, ರೇವು ರಾಚನಳ್ಳಿ, ಪ್ರೇಮಸಿಂಗ ಇದ್ದರು.