ಕಾರು ಡಿಕ್ಕಿ: ಪಾದಚಾರಿ ಗಾಯ
ಗುಲ್ಬರ್ಗ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ತೀವ್ರ ಗಾಯಗೊಂಡ ಘಟನೆ ನಗರದ ಮುಖ್ಯ ಅಂಚೆ ಕಚೇರಿ ಎದುರು ನಡೆದಿದೆ.
ಚಿತ್ತಾಪುರ ತಾಲೂಕಿನ ಬೆಣ್ಣೂರ (ಬಿ) ಗ್ರಾಮದ ನಿವಾಸಿ ಸಿದ್ದು ತಂದೆ ತಮ್ಮಣ್ಣ ಕುಂಬಾರ, ಎಂಬಾತ ಗಾಯಗೊಂಡಿದ್ದಾನೆ. ಕುಂಬಾರ ನಗರದ ಸಿಟಿ ಬಸ್ ನಿಲ್ದಾಣದಿಂದ ಮುಖ್ಯ ಅಂಚೆ ಕಚೇರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆಯಿತು. ಇದರಿಂದ ಆತ ತೀವ್ರ ಗಾಯಗೊಂಡಿದ್ದಾನೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತ ಮಹಿಳೆ ಮೇಲೆ ಹಲ್ಲೆ
ಗುಲ್ಬರ್ಗ: ಬಿತ್ತನೆಯಲ್ಲಿ ತೊಡಗಿದ್ದ ರೈತ ಮಹಿಳೆ ಮೇಲೆ ಮೈದುನ ಹಲ್ಲೆ ನಡೆಸಿದ ಘಟನೆ ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ ನಡೆದಿದೆ. ಶಾಂತಾಬಾಯಿ ಗಂಡ ರಾಜಶೇಖರ ಸಿಗರಕಂಠಿ ಎಂಬ ಮಹಿಳೆ ಗಾಯಗೊಂಡಿದ್ದಾಳೆ. ಶಾಂತಾಬಾಯಿ ಗಂಡ ಮತ್ತು ಮಕ್ಕಳು ಸೋಲಾಪುರದಲ್ಲಿ ವಾಸವಾಗಿದ್ದು, ಪ್ರತಿವರ್ಷ ನಿಂಬಾಳದಲ್ಲಿರುವ ಹೊಲದಲ್ಲಿ ಬಿತ್ತನೆ ಮಾಡಿ ಹೋಗುತ್ತಿದ್ದರು ಎನ್ನಲಾಗಿದೆ.
ಭಾನುವಾರ ಶಾಂತಾಬಾಯಿ ಗ್ರಾಮಕ್ಕೆ ಬಂದು ತಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದಾಗ ಮೈದುನ ಲಕ್ಷ್ಮೀಪುತ್ರ ಹೊಲಕ್ಕೆ ಬಂದು ಬಿತ್ತನೆ ಮಾಡಬೇಡ ಎಂದು ಅವಾಚ್ಯವಾಗಿ ಬೈದು, ಬಡಿಗೆಯಿಂದ ಹೊಡೆದು ಕಾಲಿನಿಂದ ಒದ್ದು ಗಾಯಗೊಳಿಸಿದ್ದಾನೆ. ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.