ನಿಷ್ಕಾಳಜಿಗೆ ಇನ್ನು ಕ್ರಮವೇ ಉತ್ತರ
ಶಹಾಪುರ: ಬಹುತೇಕ ವಾರ್ಡುಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯಗಳಿಲ್ಲ. ಕೆಲವೆಡೆ ಇದ್ದರೂ ಬಳಕೆಯಾಗುತ್ತಿಲ್ಲ. ಕುಡಿವ ನೀರಿಗಾಗಿ ಅಲೆಯುವ ಸ್ಥಿತಿ ಜನತೆಗೆ ಬಂದಿದೆ. ಪಟ್ಟಣ ಬಹುತೇಕವಾಗಿ ಸ್ವಚ್ಛತೆ ಕೊರತೆ ಎದುರಿಸುತ್ತಿದೆ. ಇವೆಲ್ಲ ತ್ವರಿತವಾಗಿ ಆಗಬೇಕಾದ ಕೆಲಸ. ಈ ಕುರಿತು ಅಧಿಕಾರಿಗಳು ನಿಷ್ಕಾಳಜಿ ವಹಿಸಿದರೆ ಇನ್ನು ಸಹಿಸಲಾಗದು. ಅದಕ್ಕೆ ಕ್ರಮವೇ ಉತ್ತರ.
- ಇದು ಶಾಸಕ ಗುರುಪಾಟೀಲ ಶಿರವಾಳರು ಪುರಸಭೆಯ ಮುಖ್ಯಾಧಿಕಾರಿ, ಸಂಬಂಧಿಸಿದ ತಾಂತ್ರಿಕ ವಿಭಾಗದವರು ಮತ್ತು ನೈರ್ಮಲ್ಯ ನಿರೀಕ್ಷಕರಿಗೆ ನೀಡಿದ ಎಚ್ಚರಿಕೆ.
ಪಟ್ಟಣದ ವಿವಿಧ ವಾರ್ಡುಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅವೈಜ್ಞಾನಿಕ ಚರಂಡಿಗಳು, ಎಲ್ಲೆಂದರಲ್ಲಿ ಕಸದ ರಾಶಿ, ಕುಡಿವ ನೀರಿನ ಬವಣೆ ಕುರಿತು ಸಾರ್ವಜನಿಕರ ದೂರುಗಳನ್ನು ಆಲಿಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅವ್ಯವಸ್ಥೆಗೆ ಕಡಿವಾಣ ಹಾಕಿ: ಇನ್ನು ಮುಂದೆ ಅವ್ಯವಸ್ಥೆಗೆ ಕಡಿವಾಣ ಹಾಕಬೇಕು. ನೈರ್ಮಲ್ಯ ನಿರೀಕ್ಷಕರು ಎಲ್ಲೋ ಕುಳಿತು ಕೆಲಸ ಮಾಡಿದರೆ ಆಗದು. ಪ್ರತಿಯೊಂದು ಬಡಾವಣೆಗಳನ್ನು ಆದ್ಯತೆ ಅನುಸಾರವಾಗಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸಿಕೊಳ್ಳಬೇಕು. ಮಳೆಗಾಲದ ದಿನ ನೀರು ನಿಂತಲ್ಲೇ ನಿಂತು ಹಲವಾರು ರೋಗ ರುಜಿನಗಳಿಗೆ ಕಾರಣವಾಗುವುದನ್ನು ತಪ್ಪಿಸಬೇಕು. ಪೈಪ್ಲೈನ್ಗಳು ಎಲ್ಲೆಂದರಲ್ಲೆ ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯ ಕೈಗೊಳ್ಳುವುದು ತುರ್ತು ಅಗತ್ಯವಿದೆ ಎಂದು ತಿಳಿಸಿದರು.
ಅಗತ್ಯವಿರುವೆಡೆ ಬೋರ್ವೆಲ್ಗಳನ್ನು ಕೊರೆಸಿ ನೀರಿನ ಸೌಲಭ್ಯ ಕಲ್ಪಿಸಬೇಕು. ಕಡ್ಡಾಯವಾಗಿ ಶೌಚಾಲಯ ನಿರ್ಮಾಣಕ್ಕೆ ತಕ್ಷಣ ಯೋಜನೆ ರೂಪಿಸಬೇಕು, ರಸ್ತೆ ಅತಿಕ್ರಮಿಸಿಕೊಂಡಿರುವ ಕಟ್ಟಡಗಳು, ಕಟ್ಟೆಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಕಾನೂನಿನ ನಿಯಮ ಪಾಲಿಸಿ ಸಾರ್ವಜನಿಕರ ಹಿತಾಸಕ್ತಿ ಬಹುಮುಖ್ಯವಾಗಿದ್ದು ಜನರಲ್ಲಿ, ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಹೆಚ್ಚಾಗಬೇಕಿದೆ.
ಮೂಲ ಸೌಕರ್ಯಕ್ಕೆ ಆದ್ಯತೆ: ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ಕ್ರೊಢೀಕರಿಸಿ, ಉದ್ಯಾನವನಗಳ ನಿರ್ಮಾಣ, ಸಿಸಿ ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ ಪಟ್ಟಣದ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.
ಸಾರ್ವಜನಿಕರಿಂದ ಹಲವಾರು ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು.
ಮುಖ್ಯಾಧಿಕಾರಿ ಸರೋಜಾ ಪಾಟೀಲ, ಎಂಜಿನಿಯರುಗಳಾದ ನಾನಾ ಸಾಹೇಬ, ಪುರುಷೋತ್ತಮ, ನೈರ್ಮಲ್ಯ ನಿರೀಕ್ಷಕ ಸಲೀಮ ಮತ್ತು ಪುರಸಭೆ ಸದಸ್ಯರಾದ ದೊಡ್ಡ ಮಾನಯ್ಯ, ವಸಂತ ಸುರಪುರ, ಬಸವರಾಜ ಆನೇಗುಂದಿ, ಲಾಲಅಹ್ಮದ್ ಖುರೇಶಿ, ಸಂತೋಷ ಗುತ್ತೇದಾರ, ಶೇಖಲಾಡ್ಲೆ ಇತರರು ಇದ್ದರು.