ಸಂತ್ರಸ್ತರಿಗೆ ಮಾರವಾಡಿ ಯುವ ಮಂಚ್ 3 ಲಕ್ಷ ದೇಣಿಗೆ
ಯಾದಗಿರಿ: ಉತ್ತರಾಖಂಡದಲ್ಲಿ ಉದ್ಭವಿಸಿದ ಪ್ರವಾದಲ್ಲಿ ಸಿಲುಕಿದ ಸಂತ್ರಸ್ತರಿಗೆ ಸಹಾಯ ಮಾಡಲು ನಗರದ ಮಾರವಾಡಿ ಯುವ ಮಂಚ್ 3 ಲಕ್ಷ ದೇಣಿಗೆ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದರು. ದೇಣಿಗೆ ಚೆಕ್ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ದೇಶದಲ್ಲಿ ಇದು ಒಂದು ದೊಡ್ಡ ದುರಂತ. ಪ್ರಕೃತಿ ವಿಕೋಪದಲ್ಲಿ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಅವರ ಬದುಕಿಗೆ ಆಸರೆಯಾಗಲು ಸಂಘ ಸಂಸ್ಥೆಗಳು ಸರ್ಕಾರದ ಜೊತೆಗೆ ಕೈಜೋಡಿಸಿ ಸಹಾಯ ಮಾಡಬೇಕು. ಇಂದು ಮಾರವಾಡಿ ಯುವ ಮಂಚ್ ನೀಡಿದ ಈ ದೇಣಿಗೆಯನ್ನು ಉತ್ತರಾಖಂಡ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಮಾರವಾಡಿ ಯುವ ಮಂಚ್ ಡೆಹರಾಡೂನ್, ಹರಿದ್ವಾರ ಮತ್ತು ರಷಿಕೇಶ ಕ್ಷೇತ್ರಗಳಲ್ಲಿ ಮೂರು ಸಂತ್ರಸ್ತರ ಕೇಂದ್ರಗಳನ್ನು ಸ್ಥಾಪಿಸಿ ಅವರಿಗೆ ಸಹಾಯ ಮಾಡುತ್ತಿದೆ. ಯಾದಗಿರಿ ನಗರದ ಮಂಚ್ದಿಂದ 3 ಲಕ್ಷ ಸಂಗ್ರಹಿಸಿ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ವಿಜಯಕುಮಾರ ಗೌಡ ತಿಳಿಸಿದರು. ಬಾಬು ದೋಖಾ, ಭದ್ರಿನಾರಾಯಣ ಭಟ್ಟಡ, ದಿಲೀಪ ಭಂಡಾರಿ, ಕಾಂತಿಲಾಲ ಶರ್ಮಾ, ಅಶೋಕ ಖಂಡೇಲವಾಲ, ವಿಜಯಾ, ದಿನೇಶ, ಹನುಮಾದಾಸ, ಖಾಂತಿಲಾಲ ಧೋಖಾ ಇತರರು ಇದ್ದರು.