ಗ್ರಾಮೀಣ ಮಕ್ಕಳಿಗೆ ಉತ್ತಮ ಆಹಾರ ನೀಡಿ: ದೋಖಾ
ಯಾದಗಿರಿ: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಅಲ್ಲದೇ ಅವರಿಗೆ ಶೈಕ್ಷಣಿಕವಾಗಿ ಯಾವುದೇ ರೀತಿಯಲ್ಲಿ ತೊಂದರೆಯಾಗತಂತೆ ನೋಡಿಕೊಳ್ಳಿ ಎಂದು ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಹೇಳಿದರು. ನಗರದ ಹೊರವಲಯದಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಬುಧವಾರ ಭೇಟಿ ನೀಡಿ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಾಲಕಿಯರಿಗೆ ನೀಡುವ ಅಡುಗೆಯಲ್ಲಿ ರುಚಿ ಇಲ್ಲದ್ದನ್ನು ಕಂಡು ಸಿಡಿಮಿಡಿಗೊಂಡರು.
ಮಕ್ಕಳಿಗೆ ಸೌಲಭ್ಯ ತಲುಪಿಸಿ: ನಂತರ ಅಲ್ಲಿನ ಮೇಲ್ವಿಚಾರಕರಿಗೆ ಗ್ರಾಮೀಣ ಭಾಗದಲ್ಲಿನ ಜನರು ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಪಾರ ನಿರೀಕ್ಷೆಗಳಿಟ್ಟುಕೊಂಡು ನಗರ ಪ್ರದೇಶದಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತಾರೆ. ಅವರ ಯೋಗಕ್ಷೇವು ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದ್ದು ಅದನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿನ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯವಿಲ್ಲ ಎಂದು ಪದೇ ಪದೇ ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಖುದ್ದಾಗಿ ಹಠಾತ್ ಭೇಟಿ ನೀಡುತ್ತಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ವಸತಿ ನಿಲಯಗಳಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಒತ್ತು ನೀಡುತ್ತಿದ್ದು, ಅವರಿಗಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತನವೋ ಅಥವಾ ಆಡಳಿತ ಯಂತ್ರದ ಬೇಜಾವ್ದಾರಿಯೋ ತಿಳಿಯುತ್ತಿಲ್ಲ. ಇಂತಹ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕತ್ತಲೆಯಲ್ಲಿ ಮೊರಾರ್ಜಿ ವಸತಿ ಶಾಲಾ ಮಕ್ಕಳು
ಶಹಾಪುರ: ಇಲ್ಲಿಯ ದೊರಿಗುಡ್ಡ ಮೊರಾರ್ಜಿ ವಸತಿ ಶಾಲೆ ಪಟ್ಟಣದ ಖಾಸಗಿ ಕಟ್ಟಡವೊಂದರಲ್ಲಿ ನಡೆಯುತ್ತಿದೆ. ವಿದ್ಯುತ್ ಪರಿವರ್ತಕ ಸುಟ್ಟು ಕಳೆದ ಮೂರು ದಿನದಿಂದ ಕತ್ತಲೆಯಲ್ಲಿ ವಸತಿ ಶಾಲೆಯ ಮಕ್ಕಳು ಕಾಲ ಕಳೆಯುವಂತಾಗಿದೆ. ಈ ಕುರಿತು ಅಧಿಕಾರಿಗಳು ಕಾಳಜಿ ವಹಿಸದೇ ಇರುವುದು ತೊಂದರೆಗೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ನೀರಿನ ಬವಣೆ ಉಂಟಾಗಿದೆ. ವಸತಿ ಶಾಲೆಯಲ್ಲಿ ಸರ್ಕಾರ ಮಕ್ಕಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸವಾಗುತ್ತದೆ ಎಂಬ ಭಾವನೆಯಿಂದ ಗ್ರಾಮೀಣ ಭಾಗದ ಪಾಲಕರು ತಮ್ಮ ಮಕ್ಕಳನ್ನು ವಸತಿ ಶಾಲೆಗೆ ಸೇರಿಸುತ್ತಾರೆ. ಆದರೆ ಇಲ್ಲಿನ ಅವ್ಯವಸ್ಥೆಯಿಂದ ಮಕ್ಕಳು ಸೌಲಭ್ಯ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಅಲ್ಲಿನ ಪರಿಸ್ಥಿತಿ ಬಗ್ಗೆ ಯಾರ ಮುಂದೆಯೂ ಹೇಳಿಕೊಳ್ಳದೇ ಇದ್ದ ವ್ಯವಸ್ಥೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಲು ಪಾಲಕರ ಆಗ್ರಹವಾಗಿದೆ.